ತಿರುವನಂತಪುರಂ: ಶಾಲಾಪೂರ್ವ ಶಿಕ್ಷಣದಲ್ಲಿ(ಪ್ರೀ ಸ್ಕೂಲ್) ಸಮಗ್ರ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ ಮತ್ತು ಪಠ್ಯಕ್ರಮದ ಚೌಕಟ್ಟು ನಿರ್ಣಯಕ್ಕೆ ಸೂಚಿಸಲಾಗಿದೆ.
ಬಿಡುಗಡೆಯಾದ ಕರಡು ಪ್ರಕಾರ, ಹಿಂದುಳಿದ ವರ್ಗಗಳಿಂದ ಬರುವ ಮಕ್ಕಳನ್ನು ಉಳಿಸಿಕೊಳ್ಳುವುದು ಇದರ ಗುರಿಯಾಗಿದೆ. ಮಾತೃಭಾಷೆಯನ್ನು ಶಿಕ್ಷಣದಲ್ಲಿ ಸಂವಹನ ಮಾಧ್ಯಮವಾಗಿ ಬಳಸಬೇಕು ಮತ್ತು ಲಿಂಗ ಸಮಾನತೆಯನ್ನು ಖಾತ್ರಿಪಡಿಸಬೇಕು ಎಂದು ಚೌಕಟ್ಟಿನಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಹಿನ್ನೆಲೆಯ ಮಗು ಕಲಿಕೆಯ ವಾತಾವರಣದಲ್ಲಿ ಸಮಾನತೆಯನ್ನು ಹೊಂದಿರಬೇಕು ಎಂಬುದು ಚೌಕಟ್ಟಿನ ಪ್ರಮುಖ ಪ್ರತಿಪಾದನೆಯಾಗಿದೆ. ಮಾನಸಿಕ ಮತ್ತು ದೈಹಿಕವಾಗಿ ವಿಕಲಚೇತನರು, ಅಂತರ್ ರಾಜ್ಯ ಕಾರ್ಮಿಕರ ಮಕ್ಕಳು, ಆದಿವಾಸಿಗಳು ಮತ್ತು ಭಾಷಾ ಅಲ್ಪಸಂಖ್ಯಾತರ ಮಕ್ಕಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರಿಗೆ ಶಿಕ್ಷಣವನ್ನು ಖಾತ್ರಿಪಡಿಸಬೇಕು ಎಂದು ಸೂಚಿಸಲಾಗಿದೆ.
ಮಗುವಿನ ಅಭಿರುಚಿಗೆ ತಕ್ಕಂತೆ ಆಟ ಮತ್ತು ನಗುವಿನ ಮೂಲಕ ಕಲಿಕೆಯನ್ನು ಉತ್ತೇಜಿಸಬೇಕು. ಪ್ರಾಯೋಗಿಕ ಚಟುವಟಿಕೆಗಳಿಗೆ ನಾಲ್ಕೂವರೆ ಗಂಟೆಗಳವರೆಗೆ ಬಳಸಬೇಕು. ಕಲಿಕೆಯಲ್ಲಿ ತಂತ್ರಜ್ಞಾನವನ್ನು ತರ್ಕಬದ್ಧವಾಗಿ ಬಳಸಿಕೊಂಡು ಮಕ್ಕಳ ಸ್ಕ್ರೀನಿಂಗ್ ನೋಟವನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಚೌಕಟ್ಟು ಸೂಚಿಸಿದೆ. ಕರಡಲ್ಲಿ ಶಿಕ್ಷಕರು ಮತ್ತು ಸಹಾಯಕರ ಚಟುವಟಿಕೆಗಳನ್ನು ಸಹ ನಿರ್ದಿಷ್ಟಪಡಿಸಿದೆ.
ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ರಾಜ್ಯದ ಗಡಿ ಜಿಲ್ಲೆಗಳಾದ ಕಾಸರಗೋಡು, ಪಾಲಕ್ಕಾಡ್, ವಯನಾಡಿನಂತಹ ಪ್ರದೇಶಗಳ ಭಾಷಾ ಅಲ್ಪಸಂಖ್ಯಾತರಿಗೆ ಹೆಚ್ಚು ಪ್ರಯೋಜನಕರವಾಗಲಿದೆ. ಆದರೆ ಸ್ಥಾಪಿತ ಹಿತಾಸಕ್ತಿಗಳ ಕೆಂಗಣ್ಣು ಬಿದ್ದಲ್ಲಿ ಮತ್ತೆ ಅತಂತ್ರತೆ ಎದುರಾಗಲಿದೆ.