ಕಾಸರಗೋಡು: ಎಬಿವಿಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ 'ಮಾದಕ ದ್ರವ್ಯ ವಿರುದ್ಧ ಕೈಜೋಡಿಸೋಣ' ಎಂಬ ಘೋಷಣೆಯೊಂದಿಗೆ ಜನಕೀಯ ರ್ಯಾಲಿ ಕಾಸರಗೋಡು ನಗರದಲ್ಲಿ ಜರುಗಿತು.
ಕಾಸರಗೋಡು ಕರಂದಕ್ಕಾಡಿನಿಂದ ಆರಂಭಗೊಂಡ ರ್ಯಾಲಿ ಹಳೇ ಬಸ್ ನಿಲ್ದಾಣ ಮೂಲಕ ಸಾಗಿ ಹೊಸ ಬಸ್ನಿಲ್ದಾಣ ವಠಾರದಲ್ಲಿ ಸಂಪನ್ನಗೊಂಡಿತು. ಈ ಸಂದಬ್ ನಡೆದ ಸಮಾರಂಭದಲ್ಲಿ ಎಬಿವಿಪಿ ರಾಜ್ಯ ಸಮಿತಿ ಜತೆ ಕಾರ್ಯದರ್ಶಿ ಯದುಕೃಷ್ಣನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಕ ದ್ರವ್ಯ ಮಾಫಿಯಾ ಬಲವಾಗಿ ಬೇರೂರಿದ್ದು, ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶಾಂತಿ ಸಉವ್ಯವಸಥೆ ಸಂಪೂರ್ಣ ಹದಗೆಟ್ಟಿದ್ದರೂ, ಗೃಹ ಇಲಾಖೆ ಮೂಕ ಪ್ರೇಕ್ಷಕನಾಗಿರುವುದು ರಾಜ್ಯಕ್ಕೆ ಒದಗಿದ ದುಸ್ಥಿತಿಯಾಗಿದೆ ಎಂದು ತಿಳಿಸಿದರು.
ಎಬಿವಿಪಿ ಜಿಲ್ಲಾಧ್ಯಕ್ಷ ವಿಷ್ಣು ವರಕಾಡ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಆರ್ಯಲಕ್ಷ್ಮಿ, ರಾಜ್ಯ ಸಮಿತಿ ಸದಸ್ಯ ಧೀರಜ್ ಅಣಂಗೂರು, ಕಾಸರಗೋಡು ನಗರ ಕಾರ್ಯದರ್ಶಿ ಸ್ನೇಹಾ ಉಪಸ್ಥಿತರಿದ್ದರು. ಎಬಿವಿಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ವಿಷ್ಣು ಮಾವುಂಗಲ್ ಸ್ವಾಗತಿಸಿದರು.