ಇಡುಕ್ಕಿ: ಬಿಜೆಪಿಗೆ ಸೇರ್ಪಡೆಯಾದ ಕ್ಯಾಥೋಲಿಕ್ ಪಾದ್ರಿಯೊಬ್ಬರನ್ನು ಕೆಲವೇ ಗಂಟೆಗಳಲ್ಲಿ ಚರ್ಚ್‌ನ ಪ್ರತಿನಿಧಿ (ವಿಕಾರ್) ಕರ್ತವ್ಯದಿಂದ ಬಿಡುಗಡೆ ಮಾಡಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.
ಕೇರಳದ ಸಿರೋ- ಮಲಬಾರ್ ಚರ್ಚ್‌ನ ಇಡುಕ್ಕಿ ಡಿಯಾಸಿಸ್‌ನ ಕ್ಯಾಥೋಲಿಕ್ ಪಾದ್ರಿ ಕುರಿಯಾಕೊಸೆ ಮಟ್ಟಂ ಅವರು ಸೋಮವಾರ ಇಡುಕ್ಕಿ ಜಿಲ್ಲಾ ಅಧ್ಯಕ್ಷ ಕೆಎಸ್ ಅಜಿ ಅವರಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿದ್ದರು. ಕೆಲವು ಗಂಟೆಗಳಲ್ಲಿಯೇ ಇಡುಕ್ಕಿ ಡಿಯಾಸಿಸ್ ಅವರ ವಿರುದ್ಧ ಕ್ರಮ ಕೈಗೊಂಡಿದೆ. "ಮಂಕುವಾ ಚರ್ಚ್‌ನ ಫಾದರ್ ಕುರಿಯಾಕೊಸೆ ಮಟ್ಟಂ ಅವರನ್ನು ಪಾದ್ರಿ ಕರ್ತವ್ಯದಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ" ಎಂದು ಇಡುಕ್ಕಿ ಡಿಯಾಸಿಸ್ ಹೇಳಿಕೆ ನೀಡಿದೆ.
ಚರ್ಚ್‌ನ ಪಾದ್ರಿಯು ಯಾವುದೇ ರಾಜಕೀಯ ಪಕ್ಷವನ್ನು ಸೇರಿಕೊಳ್ಳುವಂತಿಲ್ಲ ಅಥವಾ ಸಕ್ರಿಯವಾಗಿ ಭಾಗವಹಿಸುವಂತೆ ಇಲ್ಲ ಎಂದು ಕೆನಾನ್ ಕಾನೂನು ಹೇಳುತ್ತದೆ. ಹೀಗಾಗಿ ಅದರ ಅಡಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಚರ್ಚ್ ವಕ್ತಾರರೊಬ್ಬರು ತಿಳಿಸಿದ್ದಾರೆ. 74 ವರ್ಷದ ಪಾದ್ರಿ ಮಟ್ಟಂ ಅವರು ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ ಎಂದು ಚರ್ಚ್ ಮೂಲಗಳು ತಿಳಿಸಿವೆ.
ಪಾದ್ರಿ ಜತೆಗಿನ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಅಜಿ, ದೇಶದಲ್ಲಿನ ಪ್ರಸಕ್ತ ಬೆಳವಣಿಗೆಯನ್ನು ಗಮನಿಸಿದ ನಂತರ ಫಾದರ್ ಮಟ್ಟಂ ಅವರು ಬಿಜೆಪಿ ಸೇರಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಬಿಜೆಪಿಯ ಅನೇಕ ಕಾರ್ಯಕರ್ತರ ಜತೆ ಉತ್ತಮ ಸಂಬಂಧವಿದೆ. ದೇಶದಲ್ಲಿನ ಬಿಜೆಪಿ ಬಗ್ಗೆ ತಿಳಿವಳಿಕೆ ಹೊಂದಿರುವುದಾಗಿ ಮಟ್ಟಂ ತಿಳಿಸಿದ್ದಾರೆ.