ಕಾಸರಗೋಡು: ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಭವಿಷ್ಯದ ಅಭಿವೃದ್ಧಿ ದೃಷ್ಟಿಕೋನವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ 140 ಕ್ಷೇತ್ರಗಳಲ್ಲಿ ಸಂವಾದ ನಡೆಸಲು ಮುಖ್ಯಮಂತ್ರಿ ಮತ್ತು 20 ಸಚಿವರ ನೇತೃತ್ವದಲ್ಲಿ ನಡೆಯಲಿರುವ ನವಕೇರಳ ಸಂಗಮದ ಯಶಸ್ಸಿಗಾಗಿ ಸಮಾಲೋಚನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು.
ಬಂದರು ಮತ್ತು ಪ್ರಾಚ್ಯ ವಸ್ತು ಖಾತೆ ಸಚಿವ ಅಹಮದ್ ದೇವರಕೋವಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಸಭೆ ನಡೆಸಲಾಯಿತು. ನವಕೇರಳಸಂಗಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ನಡೆಸಿರುವ ಸಿದ್ಧತೆಗಳನ್ನು ಸಚಿವರು ಅವಲೋಕಿಸಿದರು. ಪ್ರತಿ ವಿಧಾನಸಭಾ ಕ್ಷೇತ್ರದ ಪಂಚಾಯಿತಿ ಮಟ್ಟದ ಸಭೆಗಳ ಪ್ರಗತಿ ಪರಿಶೀಲನೆ ನಡೆಸಿದರು. ನವ ಕೇರಳ ಸಂಗಮದ ಪ್ರತಿಯೊಂದು ಕ್ಷೇತ್ರದಲ್ಲಿನ ವೇದಿಕೆಯನ್ನೂ ತೀರ್ಮಾನಿಸಿರುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಸಚಿವರ ವಸತಿ ಮತ್ತು ಪ್ರಯಾಣದ ವ್ಯವಸ್ಥೆಯನ್ನು ಸಚಿವರು ಪರಿಶೀಲಿಸಿದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಆಯಾ ವಿಧಾನಸಭಾ ಕ್ಷೇತ್ರ ಸಮಿತಿ ಸಂಚಾಲಕರು ಹಾಗೂ ಸಹ ಸಂಚಾಲಕರು ಭಾಗವಹಿಸಿದ್ದರು.