ಕೋಯಿಕ್ಕೋಡ್ : ಪತ್ರಕರ್ತರೊಂದಿಗಿನ ಸಂವಾದದ ವೇಳೆ ಮಹಿಳಾ ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಸಂಬಂಧ ನಟ, ಬಿಜೆಪಿಯ ಮಾಜಿ ರಾಜ್ಯಸಭಾ ಸಂಸದ ಸುರೇಶ್ ಗೋಪಿ ಇಂದು ಕ್ಷಮೆಯಾಚಿಸಿದ್ದಾರೆ.
ಈ ಕುರಿತಂತೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸುರೇಶ್ ಗೋಪಿ, 'ವೇದಿಕೆ ಮೇಲಿರಲಿ ಅಥವಾ ಹೊರಗೆ ಇರಲಿ ಯಾರಿಗೂ ಅಗೌರವ ತೋರಿಸಿಲ್ಲ.
ನನ್ನ ನಡವಳಿಕೆಯಿಂದ ಮಾನಸಿಕವಾಗಿ ನೋವಾಗಿದ್ದರೆ ನಾನು ಅವರ(ಮಹಿಳಾ ಪತ್ರಕರ್ತೆ) ಬಳಿ ಕ್ಷಮೆಯಾಚಿಸುತ್ತೇನೆ.. ನನ್ನನ್ನು ಕ್ಷಮಿಸಿ' ಎಂದಿದ್ದಾರೆ.
ಏನಿದು ಘಟನೆ?
ಶುಕ್ರವಾರ ಉತ್ತರ ಕೋಯಿಕ್ಕೋಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ವೇಳೆ ಸುರೇಶ್ ಗೋಪಿ ಅವರು ಮಹಿಳಾ ಪತ್ರಕರ್ತೆಯನ್ನು ಅವರ ಭುಜ ಹಿಡಿದು ಎರಡೆರಡು ಭಾರಿ ತಳ್ಳುತ್ತಿರುವ ದೃಶ್ಯ ಸೆರೆಯಾಗಿತ್ತು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಸಿಪಿಐ(ಎಂ) ಸೇರಿದಂತೆ ಕೇರಳದ ಕಾರ್ಯನಿರತ ಪತ್ರಕರ್ತರ ಸಂಘವು ನಟನ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ವಿರೋಧ ತೀವ್ರ ಸ್ವರೂಪ ಪಡೆಯುತ್ತಲೇ ಸುರೇಶ್ ಗೋಪಿ ಕ್ಷಮೆಯಾಚಿಸಿದ್ದಾರೆ.