ನವದೆಹಲಿ: ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಜಾತಿ ರಾಜಕಾರಣದ ಬಿಸಿ ಏರುತ್ತಿದೆ. ಚುನಾವಣೆಯ ಘೋಷಣೆಯ ಬೆನ್ನಲ್ಲೇ, ದೇಶದಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು 'ಕೈ' ಪಾಳಯ ದಾಳ ಉರುಳಿಸಿದೆ. ಈ ವಿಷಯದಲ್ಲಿ ಕಮಲ ಪಾಳಯ ಇಕ್ಕಟ್ಟಿನಲ್ಲಿ ಸಿಲುಕಿದೆ.
ಲೋಕಸಭೆ ಹಾಗೂ ಐದು ರಾಜ್ಯಗಳ ಚುನಾವಣೆಗಳಲ್ಲಿ ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿಯು ಮಹಿಳಾ ಮೀಸಲಾತಿ ಮಸೂದೆಯನ್ನು ತಂದಿತು. ಮಸೂದೆ ಅಂಗೀಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ ಕಾಂಗ್ರೆಸ್, ಇತರ ಹಿಂದುಳಿದ ವರ್ಗದ (ಒಬಿಸಿ) ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕು ಎಂದು ಧ್ವನಿ ಎತ್ತಿತು. ಅದೇ ಹೊತ್ತಿಗೆ ಬಿಹಾರದಲ್ಲಿ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲಾಯಿತು. ಈ ವರದಿಯ ಪ್ರಕಾರ, ಬಿಹಾರದಲ್ಲಿ ಇತರ ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) ಒಟ್ಟು ಜನಸಂಖ್ಯೆಯ ಶೇಕಡ 63ರಷ್ಟಿವೆ.
ಈ ವರದಿ ಬಹಿರಂಗಗೊಂಡ ಕೂಡಲೇ, 'ಇಂಡಿಯಾ' ಮೈತ್ರಿಕೂಟ ಚುರುಕಾಯಿತು. ಒಬಿಸಿ ಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಹಾಗೂ ಮೈತ್ರಿಕೂಟದ ಹಲವು ಪಕ್ಷಗಳು, ರಾಷ್ಟ್ರ ಮಟ್ಟದಲ್ಲಿ ಜಾತಿಗಣತಿ ನಡೆಸಬೇಕು ಎಂದು ಪಟ್ಟು ಹಿಡಿದಿವೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಬಿತ್ತಿರುವ ಹಿಂದುತ್ವದ ಬೇರುಗಳು ಆಳವಾಗಿ ಬೇರೂರಿವೆ. ಕೇಸರಿ ಪಡೆಯ ಹಿಂದುತ್ವದ ಸಮೀಕರಣಕ್ಕೆ ಪ್ರತಿಯಾಗಿ ಒಬಿಸಿ ರಾಜಕಾರಣದ ಹೊಸ ಸಮೀಕರಣವನ್ನು ಮುನ್ನೆಲೆಗೆ ತರಲು ವಿಪಕ್ಷಗಳ ಕೂಟ ಹೆಜ್ಜೆ ಇಟ್ಟಿದೆ. ಬಿಜೆಪಿಯು ಜಾತಿ ಗಣತಿಯ ಪರವಾದ ನಿಲುವು ತಳೆದಿಲ್ಲ. ಜಾತಿ ಸಮೀಕ್ಷೆಗಳು ಜಾತಿಗಳ ನಡುವೆ ಮತ್ತಷ್ಟು ವಿಭಜನೆ ಉಂಟುಮಾಡಲಿವೆ ಎಂದು ಬಿಜೆಪಿ ನಾಯಕರು ರ‍್ಯಾಲಿಗಳಲ್ಲಿ 'ಪ್ರಚಾರ' ಮಾಡಲಾರಂಭಿಸಿದ್ದಾರೆ. ಐದು ರಾಜ್ಯಗಳ ಕಣದಲ್ಲಿ 'ಜಾತಿ ಗಣತಿ'ಯೇ ಪ್ರಮುಖ ಚುನಾವಣಾ ವಿಷಯವಾಗುವ ಸಾಧ್ಯತೆ ಇದೆ.
ಒಬಿಸಿ ಮತಗಳನ್ನು ಹಿಡಿದಿಟ್ಟುಕೊಳ್ಳಲು ಚುನಾವಣೆ ಘೋಷಣೆಗೆ ಕೆಲವು ತಿಂಗಳುಗಳ ಮೊದಲು ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ ರಾಜ್ಯಗಳ ಸರ್ಕಾರಗಳು ಹಲವು ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಿದವು. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವು ಕುರ್ಮಿ, ತೇಲಿ, ವಿಶ್ವಕರ್ಮ ಸೇರಿದಂತೆ ಒಂಬತ್ತು ಸಮುದಾಯಗಳಿಗೆ 'ಕಲ್ಯಾಣ' ಮಂಡಳಿಗಳನ್ನು ಆರಂಭಿಸಿತು. ರಾಜಸ್ಥಾನದಲ್ಲಿ ಅಶೋಕ ಗೆಹಲೋತ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೆಹಗ್ವಾಲ್, ಢಂಕಾ ಸೇರಿದಂತೆ ಒಬಿಸಿ ಸಮುದಾಯಗಳಿಗೆ ಎಂಟು ಕಲ್ಯಾಣ ಮಂಡಳಿಗಳ ಸ್ಥಾಪನೆಗೆ ಅನುಮೋದನೆ ನೀಡಿತು. ಛತ್ತೀಸಗಢದ ಭೂಪೇಶ್ ಬಘೆಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ಅಲ್ಲಿನ ಸರ್ಕಾರ ಒಬಿಸಿಗಳಿಗೆ ನಾಲ್ಕು ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಿತು.
ಹೆಚ್ಚಿನ ಮೀಸಲಾತಿ ಹಾಗೂ ಜಾತಿ ಗಣತಿ ನಡೆಸಬೇಕು ಎಂದು ಆಗ್ರಹಿಸಿ ಹಲವು ಜಾತಿ ಗುಂಪುಗಳು ರಾಜಸ್ಥಾನದಲ್ಲಿ ಕೆಲವು ತಿಂಗಳುಗಳಿಂದ 'ಮಹಾ' ಸಭೆಗಳನ್ನು ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದವು. ಐದು ರಾಜ್ಯಗಳಿಗೆ ಚುನಾವಣೆ ಘೋಷಣೆಯಾಗುವ ಎರಡು ದಿನಗಳ ಮುನ್ನ (ಅಕ್ಟೋಬರ್ 7) ರಾಜಸ್ಥಾನ ಸರ್ಕಾರವು ಜಾತಿ ಸಮೀಕ್ಷೆ ನಡೆಸಲು ಆದೇಶಿಸಿತು. ಕಳೆದ ವಾರ ಚುನಾವಣಾ ಪ್ರಚಾರದ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶ ಹಾಗೂ ಛತ್ತೀಸಗಢದಲ್ಲಿ ಜಾತಿ ಗಣತಿ ನಡೆಸುವುದಾಗಿ ಪ್ರಕಟಿಸಿದ್ದಾರೆ.
ಛತ್ತೀಸಗಢವನ್ನು ಜನರು ಗುರುತಿಸುವುದು ಬುಡಕಟ್ಟು ರಾಜ್ಯವೆಂದು. ಆದರೆ, ರಾಜ್ಯದಲ್ಲಿ ಬುಡಕಟ್ಟು ಜನಸಂಖ್ಯೆಗಿಂತ (ಶೇ 34.5) ಒಬಿಸಿಗಳ ಜನಸಂಖ್ಯೆ (ಶೇ 43.5) ಜಾಸ್ತಿ ಇದೆ. ಬಘೆಲ್ ಅವರು ರಾಜ್ಯದ ಮೊದಲ ಒಬಿಸಿ ಮುಖ್ಯಮಂತ್ರಿಯೂ ಹೌದು. ಒಬಿಸಿ ಮತಗಳನ್ನು ಸೆಳೆಯಲು ಅವರು ಅಧಿಕಾರದ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದರು. ರಾಜ್ಯದಲ್ಲಿ ಒಬಿಸಿ ಮೀಸಲಾತಿಯನ್ನು ಶೇ 14ರಿಂದ ಶೇ 27ಕ್ಕೆ ಹೆಚ್ಚಿಸಲು ಹಾಗೂ ಪರಿಶಿಷ್ಟ ಜಾತಿಯ (ಎಸ್‌ಸಿ) ಮೀಸಲಾತಿಯನ್ನು ಶೇ 12ರಿಂದ ಶೇ 13ಕ್ಕೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2022ರಲ್ಲಿ ಎರಡು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಿತು. ವಿಧಾನಸಭೆ ಅಂಗೀಕರಿಸಿದ ಈ ಮಸೂದೆಗಳಿಗೆ ರಾಜ್ಯಪಾಲರ ಸಹಿ ಬಿದ್ದಿಲ್ಲ.
ಕಾಂಗ್ರೆಸ್‌ನ ತಂತ್ರಗಳಿಗೆ ಪ್ರತಿ ತಂತ್ರ ಹೆಣೆಯುವ ಕೆಲಸವನ್ನು ಬಿಜೆಪಿ ಮಾಡಿದೆ. ಒಬಿಸಿ ಸಮುದಾಯದ ಮುಖಂಡ ಅರುಣ್ ಸಾವೋ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ 2022ರಲ್ಲಿ ನೇಮಿಸಿತು. ವಿಧಾನಸಭೆಯ ಚುನಾವಣೆಗೆ 85 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪಕ್ಷ ಅಖೈರುಗೊಳಿಸಿದೆ. ಅದರಲ್ಲಿ 29 ಮಂದಿ ಒಬಿಸಿಯವರು. 2018ರಲ್ಲಿ ಪಕ್ಷವು 28 ಒಬಿಸಿ ನಾಯಕರನ್ನು ಕಣಕ್ಕೆ ಇಳಿಸಿತ್ತು.
ಒಬಿಸಿಗಳ ಸಂಖ್ಯೆ ಎಷ್ಟು?
ಛತ್ತೀಸಗಢದಲ್ಲಿ ಒಬಿಸಿ ಜನಸಂಖ್ಯೆ ಶೇ 43.5ರಷ್ಟು ಇದೆ. 2022ರಲ್ಲಿ ಛತ್ತೀಸಗಢ ಸರ್ಕಾರ ನಡೆಸಿರುವ ಒಬಿಸಿ ಸಮೀಕ್ಷೆಯಿಂದ ಈ ಅಂಶ ಗೊತ್ತಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಪ್ರಕಾರ ಮಧ್ಯಪ್ರದೇಶದಲ್ಲಿ ಒಬಿಸಿ ಜನಸಂಖ್ಯೆ ಶೇ 48ರಷ್ಟಿದೆ. ರಾಜಸ್ಥಾನದಲ್ಲಿ ಇತರ ಹಿಂದುಳಿದ ವರ್ಗದವರು ಶೇ 42ರಷ್ಟು ಇದ್ದಾರೆ.