ನವದೆಹಲಿ: ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ನ್ನು ಸಮರ್ಥಿಸಿಕೊಳ್ಳುವ ರೀತಿಯ ಹೇಳಿಕೆ ನೀಡಿರುವ ಪರಿಣಾಮ ಇಸ್ರೇಲ್ ವಿಶ್ವಸಂಸ್ಥೆ ಅಧಿಕಾರಿಗಳಿಗೆ ವೀಸಾ ನಿರಾಕರಿಸಲು ಮುಂದಾಗಿದೆ.
ವಿಶ್ವಸಂಸ್ಥೆಯಲ್ಲಿರುವ ಇಸ್ರೇಲ್ ನ ರಾಯಭಾರಿ ಗಿಲಾಡ್ ಎರ್ಡಾನ್ ಈ ಬಗ್ಗೆ ಮಾಹಿತಿ ನೀಡಿರುವುದನ್ನು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಗುಟೆರೆಸ್ ಅವರ ಹೇಳಿಕೆಯಿಂದಾಗಿ ನಾವು ವಿಶ್ವಸಂಸ್ಥೆ ಪ್ರತಿನಿಧಿಗಳಿಗೆ ವೀಸಾ ನಿರಾಕರಿಸುತ್ತಿದ್ದೇವೆ ಎಂದು ಎರ್ಡನ್ ಆರ್ಮಿ ರೇಡಿಯೋಗೆ ಮಾಹಿತಿ ನೀಡಿದ್ದಾರೆ.
ಮಾನವೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್ ಗೆ ಈಗಾಗಲೇ ವೀಸಾ ನಿರಾಕರಿಸಿದ್ದೇವೆ ಎಂದು ಎರ್ಡನ್ ಆರ್ಮಿ ರೇಡಿಯೋಗೆ ತಿಳಿಸಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ’ ಎಂದು ಹೇಳುವ ಮೂಲಕ ಮಂಗಳವಾರ ನಡೆದ ಯುಎನ್ ಭದ್ರತಾ ಮಂಡಳಿಯ ಸಭೆಯಲ್ಲಿ ಗುಟೆರೆಸ್ ಇಸ್ರೇಲಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.
"ಹಮಾಸ್‌ನ ದಾಳಿಗಳು ನಿರ್ವಾತದಲ್ಲಿ ಸಂಭವಿಸಿಲ್ಲ ಎಂದು ಗುರುತಿಸುವುದು ಸಹ ಮುಖ್ಯವಾಗಿದೆ" ಎಂದಿದ್ದ ಗುಟೆರೆಸ್, "ಪ್ಯಾಲೆಸ್ತೀನ್ ಜನರು 56 ವರ್ಷಗಳ ಉಸಿರುಗಟ್ಟಿಸುವ ಆಕ್ರಮಣಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದರು.
"ಪೋರ್ಚುಗೀಸ್ ರಾಜತಾಂತ್ರಿಕರು ಹೀಗೆ ಹೇಳಿದರು, "ಅವರು ತಮ್ಮ ಭೂಮಿಯನ್ನು ಸ್ಥಿರವಾಗಿ ವಸಾಹತುಗಳಿಂದ ಕಬಳಿಸುವುದನ್ನು ಮತ್ತು ಹಿಂಸಾಚಾರದಿಂದ ಪೀಡಿತವಾಗುವುದನ್ನು ನೋಡಿದ್ದಾರೆ; ಅವರ ಆರ್ಥಿಕತೆ ಕುಂಠಿತವಾಯಿತು; ಅವರ ಜನರು ಸ್ಥಳಾಂತರಗೊಂಡರು; ಮತ್ತು ಅವರ ಮನೆಗಳನ್ನು ಕೆಡವಲಾಯಿತು. ಅವರ ಕಷ್ಟಗಳಿಗೆ ರಾಜಕೀಯ ಪರಿಹಾರದ ನಿರೀಕ್ಷೆಗಳು ಕಣ್ಮರೆಯಾಗುತ್ತಿವೆ.
ಭದ್ರತಾ ಮಂಡಳಿಯಲ್ಲಿ ಇಸ್ರೇಲ್- ಹಮಾಸ್ ಯುದ್ಧದ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ್ದ ಇಸ್ರೇಲ್ ನ ವಿದೇಶಾಂಗ ಸಚಿವ ಎಲಿ ಕೊಹೆನ್, ಮಾನ್ಯ ಪ್ರಧಾನ ಕಾರ್ಯದರ್ಶಿಗಳೇ ನೀವು ಯಾವ ಪ್ರಪಂಚದಲ್ಲಿ ಬದುಕುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಇಸ್ರೇಲ್ ವಿದೇಶಾಂಗ ಸಚಿವ ಕೊಹೆನ್ ಗುಟೆರೆಸ್ ಅವರೊಂದಿಗಿನ ಸಭೆಯನ್ನು ರದ್ದುಗೊಳಿಸಿದ್ದು, "ನಾನು ಯುಎನ್ ಸೆಕ್ರೆಟರಿ ಜನರಲ್ ಅವರನ್ನು ಭೇಟಿಯಾಗುವುದಿಲ್ಲ. ಅಕ್ಟೋಬರ್ 7 ರ ನಂತರ, ಸಮತೋಲಿತ ವಿಧಾನಕ್ಕೆ ಸ್ಥಳವಿಲ್ಲ. ಹಮಾಸ್ ಅನ್ನು ಪ್ರಪಂಚದಿಂದ ಅಳಿಸಿಹಾಕಬೇಕು," ಎಂದು ಟ್ವಿಟರ್ ನಲ್ಲಿ ಬರೆದಿದ್ದರು.
ವಿಶ್ವಸಂಸ್ಥೆ ರಾಯಭಾರಿ ಕಚೇರಿ ಅಧಿಕಾರಿ, ಗಿಲಾಡ್ ಎರ್ಡಾನ್ ಗುಟೆರೆಸ್‌ಗೆ "ತಕ್ಷಣ" ರಾಜೀನಾಮೆ ನೀಡುವಂತೆ ಕರೆ ನೀಡಿದ್ದಾರೆ. ಭದ್ರತಾ ಮಂಡಳಿಯ ಸಭೆಯಲ್ಲಿ ಯುಎನ್ ಸೆಕ್ರೆಟರಿ ಜನರಲ್ ಅವರ ಆಘಾತಕಾರಿ ಭಾಷಣವು, ನಮ್ಮ ಪ್ರದೇಶದಲ್ಲಿನ ವಾಸ್ತವದ ಬಗ್ಗೆ ಸೆಕ್ರೆಟರಿ ಜನರಲ್ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದ್ದಾರೆ ಮತ್ತು ನಾಜಿ ಹಮಾಸ್ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡವನ್ನು ಅವರು ವಿಕೃತ ಮತ್ತು ನೈತಿಕತೆಯೇ ಇಲ್ಲದೇ ವೀಕ್ಷಿಸುತ್ತಿದ್ದಾರೆ ಎಂದು ನಿರ್ಣಾಯಕವಾಗಿ, ಯಾವುದೇ ಅನುಮಾನ ಇರದಂತೆ ಸಾಬೀತುಪಡಿಸಿದೆ ಎಂದು ಎರ್ಡಾನ್ ಹೇಳಿದರು.