ಕಾಸರಗೋಡು: ನಗರದ ಕರಂದಕ್ಕಾಡಿನಿಂದ ಮಧೂರು ವರೆಗಿನ ರಸ್ತೆ ಅಂಚಿಗಿರುವ ವಿದ್ಯುತ್ ಕಂಬಗಳಿಂದ ವಾಹನಗಳಿಗೆ ಹಾಗೂ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಉಂಟಾಗುತ್ತಿದೆ. ಲೋಕೋಪಯೋಗಿ ಇಲಾಖೆ ಹಾಗೂ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ ಧೋರಣೆಯಿಂದ ಇಲ್ಲಿ ವಾಹನ ಚಾಲಕರು ಹಾಗೂ ಪ್ರಯಾಣಿಕರು ನಿತ್ಯ ದುರಿತ ಅನುಭವಿಸಬೇಕಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕರಂದಕ್ಕಾಡಿನಿಂದ ಮಧೂರು ವರೆಗಿನ ಸುಮಾರು ಐದು ಕಿ.ಮೀ ವ್ಯಾಪ್ತಿಯಲ್ಲಿ ಶೇ. 80ರಷ್ಟು ವಿದ್ಯುತ್ ಕಂಬಗಳು ರಸ್ತೆಗೆ ಹೊಂದಿಕೊಂಡಿದ್ದರೂ, ಈ ಬಗ್ಗೆ ಲೋಕೋಪಯೋಗಿ ಇಲಾಖೆಯಾಗಲಿ, ಕೆಎಸ್‍ಇಬಿಯಾಗಲಿ ಚಕಾರವೆತ್ತುತ್ತಿಲ್ಲ. ರಸ್ತೆ ಅಂಚಿಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ನಾಗರಿಕರು ಹಾಗೂ ಬಸ್ ಮಾಲಿಕರ ಸಂಘ ಎರಡೂ ಇಲಾಖೆಗಳಿಗೆ ಸಲ್ಲಿಸಿರುವ ಮನವಿಗಳಿಗೆ ಯಾವುದೇ ಸ್ಪಂದನೆಯಿಲ್ಲ.
ರಸ್ತೆಯಿಂದ ಇಂತಿಷ್ಟು ದೂರದಲ್ಲೇ ವಿದ್ಯುತ್ ಕಂಬ ಅಥವಾ ಇನ್ಯಾವುದೇ ಶಾಶ್ವತ ನಿರ್ಮಾಣ ನಡೆಸಬಹುದೆಂಬ ಮಾನದಂಡವನ್ನು ವಿದ್ಯುತ್ ಇಲಾಖೆ ಇಲ್ಲಿ ಗಾಳಿಗೆ ತೂರಿದೆ. ಇದನ್ನು ಪ್ರಶ್ನಿಸಬೇಕಾದ ಲೋಕೋಪಯೋಗಿ ಇಲಾಖೆ ತೆಪ್ಪಗಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳನ್ನು ಡಾಂಬರು ರಸ್ತೆಯಲ್ಲೇ ಅಳವಡಿಸಲಾಗಿದೆ. ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಯರ್‍ಸೆಕೆಂಡರಿ ಶಾಲೆ ಎದುರು ರಸ್ತೆಗೆ ಅಳವಡಿಸಿದ ದೂರವಾಣಿಯ ಕಂಬವೊಂದು ವಾಹನ ಚಾಲಕರ ಪಾಲಿಗೆ ನಿರಂತರ ಸಂಕಷ್ಟ ತಂದೊಡ್ಡುತ್ತಿದೆ. ರಸ್ತೆ ಅಂಚಿಗಿರುವ ವಿದ್ಯುತ್ ಕಂಬಗಳ ಅರಿವಿಲ್ಲದೆ ಕೆಲವು ವಾಹನಗಳು ವೇಗವಾಗಿ ಸಂಚರಿಸುತ್ತಿದ್ದು, ಇಂತಹ ಸಂದರ್ಭ ಕೂದಲೆಳೆಯ ಅಂತರದಿಂದ ಹಲವು ಅಪಘಾತಗಳು ತಪ್ಪಿದ ನಿದರ್ಶನಗಳಿವೆ.
ನಿರ್ಲಕ್ಷ್ಯಕ್ಕೆ ಬಲಿಯಾದನೇ ವಿದ್ಯಾರ್ಥಿ:
ಕಾಸರಗೋಡು ಕರಂದಕ್ಕಾಡು ಸನಿಹ ಖಾಸಗಿ ಬಸ್ ಒಂದರಲ್ಲಿ ಸಂಚರಿಸುತ್ತಿದ್ದ ಶಾಲಾ ವಿದ್ಯಾರ್ಥಿ ತಲೆ ರಸ್ತೆ ಅಂಚಿನ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ದಾರುಣವಾಗಿ ಮೃತಪಟ್ಟಿದ್ದಾನೆ. ವಿದ್ಯುತ್, ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯ ಧೊರಣೆಗೆ ಬಾಲಕನೊಬ್ಬನ ದಾರುಣ ಅಂತ್ಯ ಕಾಣಬೇಕಾಗಿ ಬಂದಿರುವುದಾಗಿ ಸಾರ್ವಜನಿಕ ವಲಯದಲ್ಲಿ ದೂರೆದ್ದಿದೆ.
ಡಾಂಬರು ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬದ ಸನಿಹದಿಂದ ಸಾಗಿದ ಬಸ್ಸಿನ ಬಾಗಿಲ ಬಳಿ ನಿಂತಿದ್ದ ವಿದ್ಯಾರ್ಥಿ ತಲೆ ಕಂಬಕ್ಕೆ ಅಪ್ಪಳಿಸಿ ದುರಂತ ಸಂಭವಿಸಿದೆ.
ಮಧೂರು ರಸ್ತೆಯ ಎರಡೂ ಬದಿ ವಿದ್ಯುತ್ ಕಂಬಗಳು ಹಾಗೂ ಅನಧಿಕೃತ ನಿರ್ಮಾಣದಿಂದ ವಾಹನ ಚಾಲಕರ ಪಾಲಿಗೆ ಈ ರಸ್ತೆ ದುರ್ಗಮವಾಗುತ್ತಿದೆ. ಬಾಲಕನ ಬಲಿ ಪಡೆದ ನಂತರವಾದರೂ ಎರಡೂ ಇಲಾಖೆಗಳು ಎಚ್ಚೆತ್ತುಕೊಳ್ಳಲಿ ಎಂಬುದಾಗಿ ಸ್ಥಳೀಯ ನಿವಾಸಿಗಳು ಸಲಹೆ ನೀಡಿದ್ದರೆ.
ಕರಂದಕ್ಕಾಡಿನಿಂದ ಮಧೂರು ವರೆಗೆ ರಸ್ತೆ ಎರಡೂ ಬದಿಯಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಈ ಬಗ್ಗೆ ಕೆಎಸ್‍ಇಬಿ ಅಥವಾ ಲೋಕೋಪಯೋಗಿ ಇಲಾಖೆ ಗಮನಹರಿಸಿಲ್ಲ. ಲೋಕೋಪಯೋಗಿ ಇಲಾಖೆಯ ಅನುಮತಿಯಿಲ್ಲದೆ, ವಿದ್ಯುತ್ ಇಲಾಖೆ ಕಂಬ ಅಳವಡಿಸುವುದು ಸಾಧ್ಯವಿಲ್ಲ. ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವುದನ್ನು ಕೈಬಿಟ್ಟು ಎರಡೂ ಇಲಾಖೆಗಳು ಪರಸ್ಪರ ಸಹಕಾರ ಮನೋಭಾವದೊಂದಿಗೆ ವಿದ್ಯುತ್ ಕಂಬ ತೆರವಿಗೆ ಮುಂದಾಗಬೇಕು.
ಕೆ. ಗಿರೀಶ್, ಅಧ್ಯಕ್ಷರು
ಖಾಸಗಿ ಬಸ್ ಮಾಲಿಕರ ಸಂಘ, ಕಾಸರಗೋಡು
ರಸ್ತೆ ಅಗಲಗೊಳಿಸುತ್ತಿದ್ದಂತೆ ವಿದ್ಯುತ್ ಕಂಬಗಳು ರಸ್ತೆಗೆ ಮತ್ತಷ್ಟು ಸನಿಹವಾಗಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಸ್ಥಾಪಿಸುವಂತೆ ಕೆಎಸ್‍ಇಬಿಗೆ ಸೂಚಿಸಲಾಗಿದೆ. ಇಲಾಖೆಯ ವಿಳಂಬ ಧೋರಣೆಯಿಂದ ತೆರವುಕಾರ್ಯ ಇನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ಕೆಎಸ್‍ಇಬಿಗೆ ಮನವರಿಕೆ ಮಾಡಲಾಗುವುದು.
ಪ್ರಕಾಶ್, ಸಹಾಯಕ ಮಹಾ ಅಭಿಯಂತ
ಲೋಕೋಪಯೋಗಿ ಇಲಾಖೆ, ರಸ್ತೆ ವಿಭಾಗ