ನವದೆಹಲಿ: ಪ್ರಧಾನಿ ಕಾರ್ಯಾಲಯದ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ವಂಚನೆಗೆ ಯತ್ನಿಸಿದ್ದ ಅಹಮದಾಬಾದ್ ಮೂಲದ ಮಾಯಂಕ್ ತಿವಾರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ತಪಾಸಣೆ ನಡೆಸಿದರು.
ನವದೆಹಲಿ: ಪ್ರಧಾನಿ ಕಾರ್ಯಾಲಯದ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ವಂಚನೆಗೆ ಯತ್ನಿಸಿದ್ದ ಅಹಮದಾಬಾದ್ ಮೂಲದ ಮಾಯಂಕ್ ತಿವಾರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ತಪಾಸಣೆ ನಡೆಸಿದರು.
ಇತ್ತೀಚೆಗೆ ವಶಕ್ಕೆ ಪಡೆಯಲಾದ ದಾಖಲಾತಿಗಳನ್ನು ಪರಿಶೀಲಿಸಲಾಗಿದ್ದು, ಆರೋಪಿ ತಿವಾರಿಯನ್ನು ಈವರೆಗೆ ಬಂಧಿಸಿಲ್ಲ ಎಂದು ಸಿಬಿಐ ತಿಳಿಸಿದೆ.
ತನ್ನನ್ನು ಪ್ರಧಾನಿ ಕಾರ್ಯಾಲಯದ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ಇಂದೋರ್ ಮೂಲದ ಆಸ್ಪತ್ರೆಯೊಂದು ನೀಡಬೇಕಿರುವ ಬಾಕಿ ₹16 ಕೋಟಿ ವಾಪಸ್ ಕೇಳಬಾರದು ಎಂದು ಅಗರ್‌ವಾಲ್ ಕಣ್ಣಿನ ಆಸ್ಪತ್ರೆಗೆ ಕರೆ ಮತ್ತು ಸಂದೇಶಗಳ ಮೂಲಕ ಒತ್ತಾಯಿಸುತ್ತಿದ್ದ ಎಂಬ ಆರೋಪ ತಿವಾರಿ ಮೇಲಿದೆ.
ಇಂದೋರ್ ಮೂಲದ ಆಸ್ಪತ್ರೆಯೊಂದನ್ನು ನಿರ್ವಹಿಸುತ್ತಿದ್ದ ಇಬ್ಬರು ವೈದ್ಯರ ಜೊತೆ ಡಾ. ಅಗರ್‌ವಾಲ್ ಆಸ್ಪತ್ರೆಯು ಒಪ್ಪಂದ ಮಾಡಿಕೊಂಡಿತ್ತು. ಈ ಪ್ರಕಾರ ಇಂದೋರ್ ಆಸ್ಪತ್ರೆಯು ಅಗರ್‌ವಾಲ್ ಆಸ್ಪತ್ರೆಗೆ ₹16 ಕೋಟಿ ಕೊಡಬೇಕಿತ್ತು. ಆದರೆ, ಒಪ್ಪಂದಗಳನ್ನು ಮೀರಿದ ಇಂದೋರ್ ಆಸ್ಪತ್ರೆಯು, ಹಣ ನೀಡಲು ನಿರಾಕರಿಸಿತ್ತು. ಹೀಗಾಗಿ ತನ್ನ ಹಣ ಪಡೆದು, ಆ ಆಸ್ಪತ್ರೆ ಜೊತೆಗಿನ ಒಪ್ಪಂದ ಮುರಿದುಕೊಳ್ಳಲು ಅಗರ್‌ವಾಲ್ ಆಸ್ಪತ್ರೆ ತೀರ್ಮಾನಿಸಿತ್ತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರವು ಹೈಕೋರ್ಟ್ ಮೆಟ್ಟಿಲೇರಿ, ಅಲ್ಲಿ ಸಂಧಾನಕಾರರೊಬ್ಬರನ್ನು ನೇಮಿಸಲಾಗಿತ್ತು. ಈ ಸಂಧಾನಕಾರ ನಾಲ್ಕು ವಾರಗಳಲ್ಲಿ ₹16.43 ಕೋಟಿ ನೀಡಬೇಕು ಎಂದು ಇಂದೋರ್ ಆಸ್ಪತ್ರೆಗೆ ಸೂಚಿಸಿದ್ದರು.
ಈ ಮಧ್ಯೆ, ತಿವಾರಿಯು ತನ್ನನ್ನು ಪ್ರಧಾನಿ ಕಾರ್ಯಾಲಯದ ಉನ್ನತ ಅಧಿಕಾರಿ ಎಂದು ಹೇಳಿಕೊಂಡು, ಅಗರ್‌ವಾಲ್ ಆಸ್ಪತ್ರೆಯು ಈ ಹಣ ಕೇಳಬಾರದು ಎಂದು ಸಂದೇಶ ಮತ್ತು ಕರೆಯ ಮೂಲಕ ಒತ್ತಾಯಿಸಲು ಆರಂಭಿಸಿದ್ದ. ಈ ಬಗ್ಗೆ ತಿಳಿದ ಪ್ರಧಾನಿ ಕಾರ್ಯಾಲಯವು, ಈ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವಂತೆ ಸಿಬಿಐಗೆ ಸೂಚಿಸಿತ್ತು.