ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢ ವಿಧಾನಸಭೆ ಚುನಾವಣೆಗಳಲ್ಲಿ ಹೊಂದಾಣಿಕೆ ಸೂತ್ರ ಮುರಿದುಬಿದ್ದ ಬಳಿಕ ಸಿಪಿಎಂ ಮತ್ತು ಸಿಪಿಐ ಈ ರಾಜ್ಯಗಳಲ್ಲಿ ಕಾಂಗ್ರೆಸ್ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಡೇ ಪ್ರಯತ್ನ ಎಂಬಂತೆ ತೆಲಂಗಾಣದಲ್ಲಿ ಸ್ಥಾನ ಹೊಂದಾಣಿಕೆ ಕುರಿತು ಮಾತುಕತೆಗಳು ನಡೆಯುತ್ತಿವೆ.
2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಎಡಪಕ್ಷಗಳು ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಇಬ್ಬರು ಹಾಲಿ ಶಾಸಕರೂ ಸೇರಿ ಒಟ್ಟು 17 ಅಭ್ಯರ್ಥಿಗಳನ್ನು ಸಿಪಿಎಂ ರಾಜಸ್ಥಾನದಲ್ಲಿ ಕಣಕ್ಕಿಳಿಸಿದೆ. ಮಧ್ಯಪ್ರದೇಶದಲ್ಲಿ ನಾಲ್ವರು ಮತ್ತು ಛತ್ತೀಸಗಢದಲ್ಲಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದೇ ವೇಳೆ, ಸಿಪಿಐನ 16 ಅಭ್ಯರ್ಥಿಗಳು ಛತ್ತೀಸಗಢದಲ್ಲಿ, ರಾಜಸ್ಥಾನದಲ್ಲಿ 12 ಮತ್ತು ಮಧ್ಯಪ್ರದೇಶದಲ್ಲಿ ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
'ಇಂಡಿಯಾ' ಮೈತ್ರಿಕೂಟದ ಇತರ ಸದಸ್ಯ ಪಕ್ಷಗಳಾದ ಜೆಡಿಯು, ಎಎಪಿ ಮತ್ತು ಸಮಾಜವಾದಿ ಪಕ್ಷಗಳು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಟ್ಟಾಗಿ ಹೋರಾಟ ಮಾಡುವುದಾಗಿ ಹೇಳಿವೆ. ಎಡಪಕ್ಷಗಳೂ ಈಗ ಇದೇ ಹಾದಿ ತುಳಿದಿವೆ.
ಹಾಗಿದ್ದೂ, ತೆಲಂಗಾಣ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡಲಿದೆ. ತಮ್ಮ ಬೇಡಿಕೆಯನ್ನು ಕಾಂಗ್ರೆಸ್ ಪರಿಗಣಿಸುತ್ತದೆ ಎಂಬ ಭರವಸೆಯನ್ನು ಸಿಪಿಎಂ ಮತ್ತು ಸಿಪಿಐ ಪಕ್ಷಗಳು ಹೊಂದಿವೆ.
ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿವಿಧಾನಸಭೆ ಚುನಾವಣೆಗಳಲ್ಲೂ 'ಇಂಡಿಯಾ' ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದ್ದರೆ ಹೆಚ್ಚಿನ ಅನುಕೂಲವಾಗುತ್ತಿತ್ತು.ಈ ಮೊದಲು ಸಿಪಿಎಂ ತೆಲಂಗಾಣದಲ್ಲಿ ಐದು ಸ್ಥಾನಗಳಿಗೆ ಬೇಡಿಕೆ ಇರಿಸಿತ್ತು. ಆದರೆ ಈಗ ಮಿರ‍್ಯಾಲಗೂಡ ಮತ್ತು ಪಾಲೈರು ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಕೋರಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಚುನಾವಣೆಯಲ್ಲಿ ಸಿಪಿಎಂ 26 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಲ್ಲಾ ಕ್ಷೇತ್ರಗಳಲ್ಲೂ ಠೇವಣಿ ಕಳೆದುಕೊಡಿತ್ತು.
ಕಳೆದ ಬಾರಿ ಮೂರಿ ಸ್ಥಾನಗಳಲ್ಲಿ ಸ್ಪರ್ಧಿಸಿ ಸೋತಿದ್ದ ಸಿಪಿಐ ಶೇ 17.7 ಮತಗಳನ್ನು ಪಡೆದಿತ್ತು. ತೆಲಂಗಾಣದ ಮಟ್ಟಿಗೆ ತುಸು ಉತ್ತಮ ಸ್ಥಿತಿಯಲ್ಲಿರುವ ಸಿಪಿಐನ ಬೇಡಿಕೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದು ಹೇಳಲಾಗಿದೆ.
ಕೊತ್ತಗೂಡಂ ಮತ್ತು ಚೆನ್ನೂರು ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಈ ಕುರಿತು ಹೈದರಾಬಾದ್‌ನಲ್ಲಿ ಮಂಗಳವಾರ ನಡೆಯುವ ಸಭೆಯಲ್ಲಿ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದು ಸಿಪಿಐ ಮೂಲಗಳು ತಿಳಿಸಿವೆ.
ಮಾತುಕತೆ ಮುರಿದುಬಿದ್ದಿರುವುದು ಸಿಪಿಎಂ ಹಿರಿಯ ನಾಯಕರಿಗೆ ಸಮಾಧಾನ ತಂದಿಲ್ಲ.