ಕುಂಬಳೆ: ಅನಂತಪುರ ಕೈಗಾರಿಕಾ ಕೇಂದ್ರದಲ್ಲಿರುವ ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಹೊರಸೂಸುವ ದುರ್ವಾಸನೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಕ್ರಿಯಾ ಸಮಿತಿ ಅನಿರ್ಧಿಷ್ಟಾವಧಿ ಚಳವಳಿ ನಡೆಸಲಿದೆ ಎಂದು ಕ್ರಿಯಾ ಸಮಿತಿ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.
ಸೇವ್ ಅನಂತಪುರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅ.2 ರಂದು ಕೈಗಾರಿಕಾ ಘಟಕದ ಮುಂದೆ ಚಳವಳಿ ಆರಂಭಗೊಳ್ಳಲಿದೆ.
ಈಗಾಗಲೇ ಸ್ಥಳೀಯರು ಜಿಲ್ಲಾಧಿಕಾರಿ ಹಾಗೂ ಇತರ ಸಂಬಂದಪಟ್ಟ ಇಲಾಖೆಗಳಿಗೆ ಹಲವು ಬಾರಿ ದೂರುಗಳನ್ನು ನೀಡುತ್ತಾ ಬಂದ್ದಿದ್ದರೂ ಸಮಸ್ಯೆಗೆ ಪರಿಹಾರ ಉಂಟಾಗದ ಹಿನ್ನೆಲೆಯಲ್ಲಿ ಚಳವಳಿಗೆ ಮುಂದಾಗಬೇಕಾಗಿದೆ ಎಂದು ಕ್ರಿಯಾ ಸಮಿತಿ ಅಧ್ಯಕ್ಷ ಟಿ.ಶರೀಫ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪರಿಹಾರ ಒದಗಿಸುವುದಾಗಿ ವರ್ಷಗಳಿಂದ ಭರವಸೆ ನೀಡಿದ್ದು ಬಿಟ್ಟರೆ ಯಾವುದೇ ಕ್ರಮ ಕೈಗೊಂಡಿಲ್ಲ. ದುರ್ವಾಸನೆ ನಿವಾರಣೆಯಾಗಿಲ್ಲ. ಸುಮಾರು ಎರಡು ವರ್ಷಗಳಿಂದ ಈ ದುರ್ನಾತವನ್ನು ಸಹಿಸುತ್ತಿದ್ದೇವೆ. ಇಲ್ಲಿ ವಾಸಿಸಲು ಸಾಧ್ಯವಾಗದ ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ಇಲ್ಲಿನ ನಿವಾಸಿಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಂದಿರುವ ದುರ್ಗಂಧ ವಾಸನೆಯನ್ನು ನಿವಾರಿಸಬೇಕು ಮತ್ತು ತ್ಯಾಜ್ಯ ನೀರನ್ನು ಹೊರಬಿಡುವುದನ್ನು ನಿಯಂತ್ರಿಸಬೇಕು, ಇಲ್ಲಿನ ಗುಡ್ಡಗಳನ್ನು ಪುಡಿಗೈದು ಮಣ್ಣನ್ನು ಸಾಗಣೆ ಮಾಡುವುದನ್ನು ನಿಲ್ಲಿಸಬೇಕು.ಈ ಪ್ರದೇಶ ಕೇಂದ್ರೀಕರಿಸಿ ಮಣ್ಣು ಮಾಫಿಯಾಗಳು ಪ್ರತಿನಿತ್ಯ 20 ರಿಂದ 25 ಲೋಡ್‍ಗಳನ್ನು ಸಾಗಿಸುತ್ತಿರುವುದು ಮಾರಕವಾಗಿದೆ. ಜನರ ಆರೋಗ್ಯ ಮತ್ತು ಆಸ್ತಿಗೆ ಹಾನಿಕಾರಕ ಕಾರ್ಖಾನೆಗಳನ್ನು ಸ್ಥಳಾಂತರಿಸಬೇಕು, ಶುದ್ಧ ಗಾಳಿ, ಶುದ್ಧ ಜಲ, ಶುದ್ಧ ಆಹಾರ ಮಾನವನ ಹಕ್ಕು ಎಂದು ಭಾರತದ ಸಂವಿಧಾನವು ಖಾತರಿಪಡಿಸುತ್ತಿದ್ದು, ಅದು ಜಾರಿಯಾಗಬೇಕು ಎಂಬ ಬೇಡಿಕೆಗಳೊಂದಿಗೆ ಸಮಸ್ಯೆ ಇತ್ಯರ್ಥವಾಗುವವರೆಗೆ ಅಕ್ಟೋಬರ್ 2ರ ಸೋಮವಾರದಿಂದ ಅನಂತಪುರದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕ್ರಿಯಾ ಸಮಿತಿ ಕಾರ್ಯದರ್ಶಿ ಸುನಿಲ್ ಅನಂತಪುರ, ಉಪಾಧ್ಯಕ್ಷ ಎ.ಕೆ.ಅಶ್ರಫ್, ಸ್ವಾಗತ್ ಸೀತಾಂಗೋಳಿ, ಪುತ್ತಿಗೆ ಗ್ರಾ.ಪಂ.ಸದಸ್ಯ ಜನಾರ್ದನ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.