ನವದೆಹಲಿ: 'ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರ ಇಸ್ರೇಲ್ ಪರವಾಗಿ ನಿಂತರೆ, ಕಾಂಗ್ರೆಸ್ ಪ್ಯಾಲೆಸ್ಟೀನ್ ಜನರ ಪರವಾಗಿ ನಿಂತಿದೆ. ಇಂಥ ಭಿನ್ನವಾದ ನಿಲುವು ಇರುವಾಗ ದೇಶದ ನಿರ್ಣಯ ಏನಾಗಿರಬೇಕು ಎಂಬುದು ಮುಖ್ಯ' ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರ ಭಿನ್ನವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಇಸ್ರೇಲ್ ಪರವಾಗಿ ನಿಂತಿರುವುದಾಗಿ ತನ್ನ ನಿರ್ಣಯ ಪ್ರಕಟಿಸಿದೆ. ಹಮಾಸ್ ಬಂಡುಕೋರರು ಇಸ್ರೇಲ್‌ಗೆ ನುಗ್ಗಿದ ನಂತರ ಉದ್ಭವಿಸಿರುವ ಯುದ್ಧದ ಪರಿಸ್ಥಿತಿಯಲ್ಲಿ ಪ್ಯಾಲೆಸ್ಟೀನ್ ಜನರ ಪರವಾಗಿ ಕಾಂಗ್ರೆಸ್ ಮಾತನಾಡುತ್ತಿದೆ' ಎಂದಿದ್ದಾರೆ.
'ಇಂದಿರಾಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರು ಆಗ ತೆಗೆದುಕೊಂಡಿದ್ದ ನಿರ್ಣಯವೇ ಈವರೆಗೂ ದೇಶದ್ದಾಗಿತ್ತು. ಈ ಎರಡು ರಾಷ್ಟ್ರಗಳ ವಿಷಯದಲ್ಲಿ ಭಾರತ ಸದಾ ಒಂದು ಸ್ಪಷ್ಟ ನಿರ್ಣಯ ಹೊಂದಿತ್ತು. ಆದರೆ ಈಗಿರುವ ಕೇಂದ್ರ ಸರ್ಕಾರ ಭಿನ್ನ ನಿಲುವು ತಾಳಿದೆ. ವಿದೇಶಾಂಗ ವ್ಯವಹಾರಗಳ ವಿಷಯದಲ್ಲಿ ಭಿನ್ನವಾದ ನಿರ್ಣಯ ತೆಗೆದುಕೊಳ್ಳುವಾಗಿ ಎಲ್ಲಾ ಪಕ್ಷಗಳ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಬೇಕು' ಎಂದಿದ್ದಾರೆ.
ಇಡೀ ಜಗತ್ತೇ ಈಗ ಯುದ್ಧದ ಪರಿಸ್ಥಿತಿಯಲ್ಲಿದೆ. ಇಂಥ ಹೊತ್ತಿನಲ್ಲಿ ಪ್ರಧಾನಿ ಅವರು ತ್ವರಿತವಾಗಿ ಸರ್ವಪಕ್ಷಗಳ ಸಭೆ ಅಥವಾ ದೇಶದ ಪ್ರಮುಖ ಹಿರಿಯ ನಾಯಕರ ಸಭೆ ಕರೆದು ಚರ್ಚಿಸಬೇಕು. ತಮ್ಮ ಜಾಗಕ್ಕಾಗಿ ಪ್ಯಾಲೆಸ್ಟೀನ್ ಜನರು ಪರದಾಟಪಡುತ್ತಿರುವುದು ಹಾಗೂ ಘನತೆಯ ಬದುಕಿಗಾಗಿ ನಡೆಸುತ್ತಿರುವ ಹೋರಾಟ ಕುರಿತಂತೆ ಕಾಂಗ್ರೆಸ್ ತನ್ನ ಕಳವಳ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ಕದನ ವಿರಾಮ, ಮಾತುಕತೆ ಮೂಲಕ ಸದ್ಯದ ಬಿಕ್ಕಟ್ಟು ಶಮನಕ್ಕೆ ಕ್ರಮ ಕೈಗೊಳ್ಳಬೇಕಿದೆ' ಎಂದು ಸಂಸದೆ ಸುಳೆ ಒತ್ತಾಯಿಸಿದರು.