ಆಗ್ರಾ: ಶಿಕ್ಷಕರೊಬ್ಬರ ಕಾಲಿಗೆ ಇಬ್ಬರು ವಿದ್ಯಾರ್ಥಿಗಳು ಗುಂಡು ಹೊಡೆದ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿ ನಡೆದಿದೆ.
ಕೋಚಿಂಗ್ ಸೆಂಟರ್‌ನ ಹೊರಗಡೆ ಶಿಕ್ಷಕನ ಮೇಲೆ ಗುಂಡಿನ ದಾಳಿ ಮಾಡಿರುವ ವಿದ್ಯಾರ್ಥಿಗಳು, ಇನ್ನು ಆರು ತಿಂಗಳ ಒಳಗೆ ಶಿಕ್ಷಕನ ಮೇಲೆ ಮತ್ತೆ ಗುಂಡು ಹಾರಿಸುವುದಾಗಿ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಘಟನೆ ಸಂಬಂಧ 16 ಹಾಗೂ 18 ವರ್ಷದ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿಯ ಜತೆ ಮಾತನಾಡಬಾರದು ಎಂದು ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬನಿಗೆ ಹಲ್ಲೆಗೆ ಒಳಗಾದ ಶಿಕ್ಷಕ ಸುಮಿತ್ ಸಿಂಗ್ ಅವರು ತಿಳಿಸಿದ್ದರು. ಇದಕ್ಕಾಗಿ ಸುಮಿತ್ ಅವರ ಸಹೋದರ ತರುಣ್ ಅವರ ಜತೆ ವಿದ್ಯಾರ್ಥಿಗಳು ಫೋನ್‌ನಲ್ಲಿ ವಾಗ್ವಾದ ಕೂಡ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಗುರುವಾರ ಈ ಪೈಕಿ ಒಬ್ಬ ಶಿಕ್ಷಕ ಸಿಂಗ್ ಅವರಿಗೆ ಕರೆ ಮಾಡಿ ಹೊರಗೆ ಬರುವಂತೆ ಹೇಳಿದ್ದಾನೆ. ಇನ್ನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯ ಎಸಗಿದ ಬಳಿಕ ಇಬ್ಬರು ವಿದ್ಯಾರ್ಥಿಗಳು 25 ಸೆಕೆಂಡುಗಳ ವಿಡಿಯೊ ಮಾಡಿದ್ದು, ಅದರಲ್ಲಿ ಬಾಲಿವುಡ್‌ನ ಖ್ಯಾತ ಸಿನಿಮಾ 'ಗ್ಯಾಂಗ್ಸ್ ಆಫ್ ವಾಸೀಪುರ್'ನ ಪಾತ್ರಗಳಿಗೆ ತಮ್ಮನ್ನು ಹೋಲಿಸಿಕೊಂಡಿದ್ದಾರೆ.
ವಿಡಿಯೊದಲ್ಲಿ ಒಬ್ಬ ವಿದ್ಯಾರ್ಥಿ ಬೈಗುಳಗಳ ಮಳೆಗರೆಯುತ್ತಿದ್ದು, '40 ಗುಂಡುಗಳು ಹಾರಿಸಬೇಕಿದೆ. 39 ಬಾಕಿ ಇದೆ' ಎಂದು ಹೇಳಿದ್ದಾನೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಆಗ್ರಾ ಪಶ್ಚಿಮ ವಿಭಾಗದ ಪೊಲೀಸ್ ಉಪ ಆಯುಕ್ತ ಸೋನಮ್ ಕುಮಾರ್, 'ಆಗ್ರಾದ ಖಂಡೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲುಪುರ ರಸ್ತೆಯಲ್ಲಿರುವ ಕೋಚಿಂಗ್ ಸೆಂಟರ್‌ನ ಹೊರಗಡೆ ಈ ಕೃತ್ಯ ನಡೆದಿದೆ. 16 ಹಾಗೂ 18 ವರ್ಷದ ಇಬ್ಬರು ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ
ಕಾಲಿಗೆ ಗಾಯಗೊಂಡಿರುವ ಶಿಕ್ಷಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.