ಕಾಸರಗೋಡು: ಸಮಾಜದಲ್ಲಿ ಬದಲಾವಣೆಯಲ್ಲಿ ಕವಿಗಳ ಪಾತ್ರ ಮಹತ್ತರವಾದುದು ಎಂಬುದಾಗಿ ಮಂಗಳೂರು ಬೆಸೆಂಟ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ತಿಳಿಸಿದ್ದಾರೆ. ಅವರು ಕಾಸರಗೋಡು ಕೋಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಾಮಾಜಿಕ, ಸಾಂಸ್ಕøತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿ ಚಿನ್ನಾರಿಯ ಒಂಬತ್ತನೇ ಸರಣಿ ಕಾರ್ಯಕ್ರಮ'ವರ್ಷ ರಿಂಗಣ' ಮತ್ತು ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸ್ತ್ರೀ ಸಂವೇದನೆಯ ಜತೆಗೆ ಬದುಕು ಕಟ್ಟಿಕೊಡುವ ಸಾಹಿತ್ಯದ ಅಗತ್ಯ ಇಂದಿನ ಸಮಾಜಕ್ಕಿದೆ. ಬಾಂಧವ್ಯ ಬೆಸೆಯುವ ಹಾಗೂ ಜೀವನ ಕಟ್ಟಿಕೊಡುವ ಮಹತ್ವದ ಕೆಲಸಗಳು ಇಂದಿನ ಕಾಲಘಟ್ಟದಲ್ಲಿ ಕ್ಲಿಷ್ಟಕರವಾಗುತ್ತಿದ್ದು, ಇಂತಹ ಕೃತಿಗಳನ್ನು ಹೊರತರಲು ಸಾಹಿತಿಗಳು ಮುಂದಾಗಬೇಕು. ಜತೆಗೆ ಮಕ್ಕಳಲ್ಲಿ ಸಾಹಿತ್ಯ ರಚನೆ ಹಾಗೂ ಓದುವ ಹವ್ಯಾಸ ಬೆಳೆಸಿಕೊಳ್ಳಳು ಹೆತ್ತವರು ನೆರವಾಗಬೇಕು ಎಂದು ತಿಳಿಸಿದರು.
ನಾರಿ ಚಿನ್ನಾರಿ ಕಾರ್ಯಾಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಕವಯಿತ್ರಿ ಲಕ್ಷ್ಮೀ ಕೆ. ಅವರ ಕವನ ಸಂಕಲನ''ನೀನಿಲ್ಲ-ಇಲ್ಲಿ ನಾನು ಮಾತ್ರ'ಕೃತಿಯನ್ನು ಡಾ. ಮೀನಾಕ್ಷಿ ರಾಮಚಂದ್ರ ಬಿಡುಗಡೆಗೊಳಿಸಿದರು. ಕವಯಿತ್ರಿ, ಕತೆಗಾರ್ತಿ ಸ್ನೇಹಲತಾದಿವಾಕರ್ ಪುಸ್ತಕ ಪರಿಚಯ ನೀಡಿದರು. ಸರೋಜಿನಿ ಕೆ. ಭಟ್ ಪ್ರಥಮ ಕೃತಿಯನ್ನು ಸವೀಕರಿಸಿದರು. ಈ ಸಂದರ್ಭ ಕವಯಿತ್ರಿ, ಪ್ರಾಧ್ಯಾಪಕಿ ಲಕ್ಷ್ಮೀ ಕೆ. ಹಾಗೂ ತುಳು ಜಾನಪದ ಕಲವಿದೆ ಲಕ್ಷ್ಮೀ ಕುಂಬ್ಡಾಜೆ ಅವರನ್ನು ಗೌರವಿಸಲಾಯಿತು. ರಂಗಚಿನ್ನಾರಿ ನಿರ್ದೇಶಕರಾದ ಚಿನ್ನ ಕಾಸರಗೋಡು ಉಪಸ್ಥಿತರಿದ್ದರು. ಡಾ. ಆಶಾಲತಾ ಸನ್ಮಾನಿತರ ಪರಿಚಯ ನೀಡಿದರು. ವೀಣಾ ಅರುಣ್ ಶೆಟ್ಟಿ ಸ್ವಾಗತಿಸಿದರು. ದಿವ್ಯಾಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಹೇಮಲತಾ ಶೆಟ್ಟಿ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡ ಭಾವಗೀತೆ, ಕೂಚುಪುಡಿ ನೃತ್ಯ, ಮಲಯಾಳ ಭಾವಗೀತೆ, ಕಥೆ, ಕಳರಿಪಯಟ್ಟ್, ಸ್ವರಚಿತ ಕವನವಾಚನ, ಶಾಸ್ತ್ರೀಯ ನೃತ್ಯ, ತುಳುಜಾನಪದ ಗೀತೆ ಗಾಯನ ನಡೆಯಿತು.