ಉಪ್ಪಳ: ಬಸ್ ಪ್ರಯಾಣದ ಮಧ್ಯೆ ತಮ್ಮ ಮಗುವನ್ನು ಬಸ್ಸಲ್ಲಿ ಮರೆತು ದಂಪತಿ ಇಳಿದುಹೋದ ಘಟನೆ ಉಪ್ಪಳದಲ್ಲಿ ನಡೆದಿದೆ. ಯುವಕನ ಸಮಯಪ್ರಜ್ಞೆಯಿಂದ ಮಗು ಕೊನೆಗೂ ದಂಪತಿ ಕೈಸೇರಿದೆ.
ಉಪ್ಪಳದಿಂದ ಮೂವರು ಮಕ್ಕಳೊಂದಿಗೆ ದಂಪತಿ ಕುಂಬಳೆ ಭಾಗಕ್ಕೆ ತೆರಳುವ ಬಸ್ಸನ್ನೇರಿದ್ದು, ಬಂದ್ಯೋಡು ಮುಟ್ಟಂಗೆ ಟಿಕೆಟ್ ತೆಗೆದಿದ್ದರು.ಬಸ್ಸಲ್ಲಿ ಪ್ರಯಾಣಿಕರು ಹೆಚ್ಚಿನಸಂಖ್ಯೆಯಲ್ಲಿದ್ದ ಹಿನ್ನೆಲೆಯಲ್ಲಿ ಕೈಯಲ್ಲಿದ್ದ ಒಂದು ಮಗುವನ್ನು ಮಹಿಳೆ ಸೀಟಲ್ಲಿ ಕುಳಿತಿದ್ದ ಪ್ರಯಾಣಿಕರ ಕೈಗಿತ್ತಿದ್ದರು. ಈ ಮಧ್ಯೆ ಪತಿ ಒಂದು ಮಗುವಿನೊಂದಿಗೆ ಬಂದ್ಯೋಡಿನಲ್ಲಿ ಬಸ್ಸಿಳಿದಿದ್ದಾರೆ. ಇದನ್ನರಿಯದ ಮಹಿಳೆ ಇನ್ನೊಂದು ಮಗುವಿನೊಂದಿಗೆ ಮುಂದಕ್ಕೆ ಮುಟ್ಟಂ ಬಳಿ ಬಸ್ಸಿಳಿದಿದ್ದಾರೆ. ಈ ಮಧ್ಯೆ ಮಗುವನ್ನು ಹಿಡಿದಿದ್ದ ಪ್ರಯಾಣಿಕ ಕುಂಬಳೆಯಲ್ಲಿ ಇಳಿಯಲು ಸಿದ್ಧನಾದಾಗ ಮಗುವನ್ನು ನೀಡಿದ ಹೆತ್ತವರು ಕಾಣಿಸಲಿಲ್ಲ. ಈ ಮಧ್ಯೆ ಬೈಕಲ್ಲಿ ಆಗಮಿಸಿದ ಇಬ್ಬರು ಮಗು ತಮ್ಮದೆಂದು ತಿಳಿಸಿದರೂ, ಇವರಿಗೆ ಹಸ್ತಾಂತರಿಸದೆ, ನೇರ ಪೊಲೀಸ್ ಠಾಣೆಗೆ ಮಗುವನ್ನು ಕರೆದೊಯ್ದಿದ್ದಾರೆ. ವಿಷಯ ವೈರಲ್ ಆಗುತ್ತಿದ್ದಂತೆ ಇತ್ತ ದಂಪತಿಗೂ ಮಾಹಿತಿ ಲಭಿಸಿ, ನೇರ ಠಾಣೆಗೆ ಹಾಜರಾಗಿ ಮಗುವನ್ನು ಕರೆದೊಯ್ದಿದ್ದಾರೆ. ಮಗುವನ್ನು ಹಸ್ತಾಂತರಿಸುವ ಮಧ್ಯೆ ಪೊಲೀಸರು ದಂಪತಿಗೆ ಎಚ್ಚರಿಕೆಯನ್ನೂ ನೀಡಿ ಕಳುಹಿಸಿದ್ದಾರೆ.