ತಿರುವನಂತಪುರಂ: ಕೇರಳದಲ್ಲಿ ಬಡತನ ನಿರ್ಮೂಲನೆ ಮಾಡುವಲ್ಲಿ ಮಹಿಳಾ ಸಬಲೀಕರಣ ಚಟುವಟಿಕೆಗಳಿಂದ ಸಾಧ್ಯವಾಗಿದೆ ಎಂದು ಮಣಿಪುರ ಶಾಸಕ ಎಂ.ರಾಮೇಶ್ವರ್ ಸಿಂಗ್ ಹೇಳಿದ್ದಾರೆ. ಮಣಿಪುರ ಶಾಸಕರು ಕೇರಳದಲ್ಲಿ ಮಹಿಳಾ ಸಬಲೀಕರಣ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಅಧ್ಯಯನ ಪ್ರವಾಸ ನಡೆಸಿದ್ದು, ನಿನ್ನೆ ಈ ಬಗ್ಗೆ ಮಾತನಾಡಿದರು. ರಾಮೇಶ್ವರ್ ಸಿಂಗ್ ಅವರು ಕೇರಳದ ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಅವರನ್ನು ಭೇಟಿಯಾದರು.
ಕೇರಳದ ಮಹಿಳಾ ಸ್ವಸಹಾಯ ಗುಂಪುಗಳು(ಕುಟುಂಬಶ್ರೀ) ರಾಜ್ಯದ ಸಾಮಾಜಿಕ ಪ್ರಗತಿಯಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸುತ್ತಿವೆ. ಮಹಿಳೆಯರ ನೇತೃತ್ವದ ಕೊಚ್ಚಿ ವಾಟರ್ ಮೆಟ್ರೋ ಚಟುವಟಿಕೆಗಳಿಗೆ ಮತ್ತು ನೆರೆಹೊರೆಯ ಗುಂಪುಗಳ ನೇತೃತ್ವದಲ್ಲಿ 20 ರೂ.ಗೆ ಆಹಾರವನ್ನು ಒದಗಿಸುವ ಕ್ಯಾಂಟೀನ್‍ಗಳಿಗೆ ರಾಮೇಶ್ವರ್ ಸಿಂಗ್ ಅವರು ಭೇಟಿ ನೀಡಿದರು.
ರಾಜ್ಯದ ಎಲ್ಲಾ ಭಾಗಗಳಲ್ಲಿ ಮಹಿಳಾ ಸಬಲೀಕರಣ ಯೋಜನೆಗಳು ಮಹಿಳೆಯರ ನಿರುದ್ಯೋಗವನ್ನು ಪರಿಹರಿಸುವ ಮತ್ತು ಅವರಿಗೆ ಆರ್ಥಿಕ ಸಬಲೀಕರಣವನ್ನು ನೀಡುವ ಗುರಿಯನ್ನು ಹೊಂದಿವೆ. ಇದು ಮಣಿಪುರ ಮತ್ತು ದೇಶದ ಇತರ ರಾಜ್ಯಗಳು ಜಾರಿಗೆ ತರಬಹುದಾದ ಮಾದರಿ ಯೋಜನೆಯಾಗಿದೆ ಎಂದು ರಾಮೇಶ್ವರ್ ಸಿಂಗ್ ತಿಳಿಸಿದರು. ರಾಮೇಶ್ವರ್ ಸಿಂಗ್ ಮಣಿಪುರದ ಕಚ್ಚಿಂಗ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.
ಈ ನಡುವೆ ನಿನ್ನೆ ಕುಟುಂಬಶ್ರೀ ಬಗ್ಗೆ ತಿಳಿದುಕೊಳ್ಳಲು ಸ್ವೀಡನ್‍ನಿಂದ ಇಬ್ಬರು ಕೇರಳಕ್ಕೆ ಬಂದಿದ್ದರು. ಸೋಫಿಯಾ ಬ್ರೋಮನ್ ಮತ್ತು ಸ್ಟೆಲ್ಲಾ ನಾರ್ಡೆನ್‍ಮನ್ ರಾಜ್ಯಕ್ಕೆ ಭೇಟಿ ನೀಡಿ ಸಚಿವ ಎಂ.ಬಿ.ರಾಜೇಶ್ ಅವರನ್ನು ಭೇಟಿಯಾದರು. ಸ್ಟಾಕ್‍ಹೋಮ್‍ನ ಮೇರಿ ಸೆಡರ್‍ಸ್ಕೋಲ್ಡ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಇಂಟರ್ನ್‍ಶಿಪ್‍ನ ಭಾಗವಾಗಿ ಕುಟುಂಬಶ್ರೀ ಬಗ್ಗೆ ಕಲಿಯಲು ಕೇರಳಕ್ಕೆ ಆಗಮಿಸಿದ್ದರು.
ಕಡು ಬಡತನ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಕುಟುಂಬಶ್ರೀ ಜಾರಿಗೆ ತಂದಿರುವ ‘ಉಜ್ಜೀವನಂ’ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ತಮ್ಮನ್ನು ಭೇಟಿ ಮಾಡಿರುವುದಾಗಿ ಸಚಿವ ಎಂ.ಬಿ.ರಾಜೇಶ್ ಫೇಸ್ ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಕುಟುಂಬಶ್ರೀ ನೀಡಿರುವ ವಿಶಿಷ್ಟ ಉದಾಹರಣೆಗಳನ್ನು ವಿಶ್ವವೇ ಗುರುತಿಸಿ ಸ್ವೀಕರಿಸುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
'ಇಲ್ಲಿ ಈ ಪುಟ್ಟ ಕೇರಳದಲ್ಲಿ, ಪ್ರತಿ ನೆರೆಹೊರೆಯು ಅಭಿವೃದ್ಧಿ ಹೊಂದಿದ ದೇಶಗಳ ಸಂಶೋಧಕರಿಗೂ ಅದ್ಭುತ ಅನುಭವವನ್ನು ನೀಡುತ್ತದೆ. ಹೆಚ್ಚಿನ ಯುವಕರನ್ನು ಕುಟುಂಬಶ್ರೀಯ ಭಾಗವಾಗಿಸಿ ಉದ್ಯಮಿಗಳನ್ನಾಗಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಕೇರಳದ ಕುಟುಂಬಶ್ರೀಯ ಹೆಮ್ಮೆಯನ್ನು ಇನ್ನಷ್ಟು ಉತ್ಕøಷ್ಟತೆಯತ್ತ ಮುನ್ನಡೆಸೋಣ’ ಎಂದು ಸಚಿವ ಎಂ.ಬಿ.ರಾಜೇಶ್ ಹೇಳಿದರು.