ನವದೆಹಲಿ: ಹಿಂದೂ ಅವಿಭಕ್ತ ಕುಟುಂಬದ ಹಿರಿಯ ಸದಸ್ಯನು ('ಕರ್ತ') ಕುಟುಂಬದ ಆಸ್ತಿಯನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವ, ಮಾರಾಟ ಮಾಡುವ ಅಥವಾ ಅಡಮಾನ ಇಡುವ ಅಧಿಕಾರ ಹೊಂದಿದ್ದಾನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕುಟುಂಬದ ಅಪ್ರಾಪ್ತ ವಯಸ್ಕ ಸದಸ್ಯನೂ ಆಸ್ತಿಯಲ್ಲಿ ಹಕ್ಕು ಹೊಂದಿರಬಹುದು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್.ವಿ.ಎನ್.ಭಟ್ಟಿ ಅವರಿದ್ದ ನ್ಯಾಯಪೀಠವು ಅರ್ಜಿಯೊಂದರ ವಿಚಾರಣೆ ವೇಳೆ ಈ ಮಾತು ಹೇಳಿದೆ.
'ಹಿಂದೂ ಅವಿಭಕ್ತ ಕುಟುಂಬವು ತನ್ನ ಆಸ್ತಿಯನ್ನು 'ಕರ್ತ' ಅಥವಾ ಅದರ ವಯಸ್ಕ ಸದಸ್ಯನ ಮೂಲಕ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ' ಎಂದು ಹೇಳಿರುವ ನ್ಯಾಯಪೀಠ, 'ಆಸ್ತಿಯ ಮೇಲೆ ಕರ್ತನು ಹೊಂದಿರುವ ಹಕ್ಕಿನ ವಿಚಾರವನ್ನು ಈಗಾಗಲೇ ನಿರ್ಣಯಿಸಲಾಗಿದೆ' ಎಂದು ಹೇಳಿದೆ.
'ಹಿಂದೂ ಅವಿಭಕ್ತ ಕುಟುಂಬದ ಕರ್ತನಾದ ನನ್ನ ತಂದೆ, ಕುಟುಂಬದ ಆಸ್ತಿಯನ್ನು ಅಡಮಾನ ಇಟ್ಟಿದ್ಧಾರೆ' ಎಂದು ದೂರಿ ಎನ್.ಎಸ್.ಬಾಲಾಜಿ ಎಂಬುವರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮದ್ರಾಸ್ ಹೈಕೋರ್ಟ್, ಬಾಲಾಜಿ ಅವರ ಅರ್ಜಿಯನ್ನು ತಳ್ಳಿ ಹಾಕಿ ಜುಲೈ 31ರಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಬಾಲಾಜಿ ಅವರು ರಜಾಕಾಲದ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.
ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿರುವ ನ್ಯಾಯಪೀಠ, ಬಾಲಾಜಿ ಅವರ ಮೇಲ್ಮನವಿಯನ್ನು ವಜಾಗೊಳಿಸಿದೆ.
'ಅರ್ಜಿದಾರನ ತಂದೆ ಹಿಂದೂ ಅವಿಭಕ್ತ ಕುಟುಂಬದ 'ಕರ್ತ' ಆಗಿದ್ದು, ಕುಟುಂಬದ ಆಸ್ತಿಯನ್ನು ಅಡಮಾನ ಇಡುವ ಅಧಿಕಾರ ಹೊಂದಿದ್ದಾರೆ' ಎಂದೂ ಹೇಳಿದೆ.