ಗುವಾಹಟಿ: 'ಮಣಿಪುರದಲ್ಲಿ ಐದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರವು ಭಾರತ ಒಕ್ಕೂಟದ ವಿರುದ್ಧ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಕುಕಿ ಮೂಲಭೂತವಾದಿಗಳು ಮತ್ತು ರಾಜ್ಯದಲ್ಲಿ ಸಕ್ರಿಯವಾಗಿರುವ ಮೂಲಭೂತವಾದಿ ಸಂಘಟನೆಗಳ ಜಂಟಿ ಕಾರ್ಯಾಚರಣೆಯಾಗಿದೆ' ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದರು.
'ರಾಜ್ಯದಲ್ಲಿ ಈಗ ನಡೆಯುತ್ತಿರುವ ಘರ್ಷಣೆಯು ಜನಾಂಗೀಯ ಘರ್ಷಣೆ ಅಥವಾ ಕಾನೂನು ಸುವ್ಯವಸ್ಥೆಯ ವಿಷಯವಲ್ಲ. ಇದು, ಭಾರತ ಒಕ್ಕೂಟದ ವಿರುದ್ಧ ಮೂಲಭೂತವಾದಿಗಳು ನಡೆಸುತ್ತಿರುವ ಯುದ್ಧವಾಗಿದೆ' ಎಂದು ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಆರೋಪಿಸಿದರು.
'ಗುಂಪೊಂದರ ಕೆಲವರು ಈಗ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದು, ಮಣಿಪುರದ ಏಕತೆಗೆ ಧಕ್ಕೆ ತರುವ ಉದ್ದೇಶ ಹೊಂದಿದ್ದಾರೆ. ಆದರೆ, ಇದನ್ನು ಜನಾಂಗೀಯ ಸಂಘರ್ಷ ಅಥವಾ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನ ಘರ್ಷಣೆ ಎಂಬಂತೆ ಬಿಂಬಿಸುತ್ತಿದ್ದಾರೆ' ಎಂದು ಹೇಳಿದರು.