ಕೊಚ್ಚಿ: ಕಾರು ನದಿಗೆ ಬಿದ್ದ ಪರಿಣಾಮ ವೈದ್ಯರು ದಾರುಣ ಅಂತ್ಯ ಕಂಡಿದ್ದಾರೆ. ಕೊಡಂಗಲ್ಲೂರು ಖಾಸಗಿ ಆಸ್ಪತ್ರೆ ಡಾ. ಅದ್ವೈತ್, ಡಾ. ಅಜ್ಮಲ್ ಮೃತರಾದವರು.
ಉತ್ತರ ಪರವೂರಿನ ಗೋಟುರತ್ ಎಂಬಲ್ಲಿ ಕಲವಾತುರುತ್ ನದಿಗೆ ಕಾರು ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. 5 ಮಂದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.
ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. 5 ಜನರ ತಂಡ ಗೂಗಲ್ ಮ್ಯಾಪ್ ನೋಡಿಕೊಂಡು ವಾಹನ ಚಲಾಯಿಸುತ್ತಿದ್ದರು. ವಾಹನದಲ್ಲಿ ಇಬ್ಬರು ವೈದ್ಯರು ಮತ್ತು ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೊಚ್ಚಿಯಲ್ಲಿ ನಡೆದ ಉತ್ಸವದಲ್ಲಿ ಪಾಲ್ಗೊಂಡು ಕೊಡಂಗಲ್ಲೂರಿಗೆ ಹಿಂತಿರುಗುತ್ತಿದ್ದಾಗ ಕಾರು ನದಿಗೆ ಬಿದ್ದಿದೆ. ಭಾರೀ ಮಳೆಯಿಂದಾಗಿ ದಿಕ್ಕು ತಿಳಿಯದೆ, ರಸ್ತೆ ಸರಿಯಾಗಿ ಅರ್ಥವಾಗದೆ ಗೂಗಲ್ ಮ್ಯಾಪ್ ಬಳಸಿ ವಾಹನ ಚಲಾಯಿಸಿದ್ದು ಅಪಘಾತಕ್ಕೆ ಕಾರಣ. ರಕ್ಷಿಸಲಾದ ಮೂವರು ವೈದ್ಯಕೀಯ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.