ಮುಂಬೈ: ವಜಾಗೊಂಡಿದ್ದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಜೆ ಅವರನ್ನು ಪೊಲೀಸ್ ಇಲಾಖೆಗೆ ಮರು ಸೇರ್ಪಡೆ ಮಾಡಿಸಲು ಆದಿತ್ಯ ಠಾಕ್ರೆ ಅವರು ತಮ್ಮ ತಂದೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ ಶಿಫಾರಸು ಮಾಡಿದ್ದರು ಎಂದು ಏಕನಾಥ್ ಶಿಂದೆ ನೇತೃತ್ವದ ಶಿವಸೇನಾ ಬಣದ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಆಪ್ತರಾದ ಕೈಗಾರಿಕಾ ಸಚಿವ ಉದಯ್ ಸಮಂತ್ ಮಾಡಿರುವ ಈ ಆರೋಪಕ್ಕೆ ಉದ್ಧವ್ ಠಾಕ್ರೆ ಬಣದ (ಯುಬಿಟಿ) ಶಿವಸೇನಾ ನಾಯಕರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆದಿತ್ಯ ಠಾಕ್ರೆ ಅವರು ಪರಿಸರ, ಪ್ರವಾಸೋದ್ಯಮ ಮತ್ತು ಶಿಷ್ಟಾಚಾರ ಖಾತೆ ಸಚಿವರಾಗಿದ್ದಾಗ ಸಚಿನ್ ವಾಜೆ ಅವರನ್ನು ಪೊಲೀಸ್ ಇಲಾಖೆಗೆ ಪುನಾ ಸೇರ್ಪಡೆಮಾಡಿಕೊಳ್ಳುವಂತೆ ಶಿಫಾರಸು ಮಾಡಿದ್ದರು. ಇದರಿಂದ 2018ರಲ್ಲಿ ವಜಾಗೊಂಡಿದ್ದ ಸಚಿನ್ ವಾಜೆ ಅವರನ್ನು ಪುನಾ ಪೊಲೀಸ್ ಸೇವೆಗೆ ನೇಮಕ ಮಾಡಲಾಗಿತ್ತು ಎಂದು ಸಮಂತ್ ಆರೋಪಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಪಕ್ಷದ ಪರವಾಗಿ ಸಚಿನ್ ವಾಜೆ ಅವರಿಗೆ ರಕ್ಷಣೆ ನೀಡಿದ್ದಾರೆ ಎಂದೂ ಸಮಂತ್ ಆರೋಪಿಸಿದ್ದಾರೆ.