ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರನ್ನು ತನಿಖಾ ಸಂಸ್ಥೆಯ ಜೈಲಿನಿಂದ ವರ್ಗಾವಣೆ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಇಲ್ಲಿನ ನ್ಯಾಯಾಲಯಕ್ಕೆ ತಿಳಿಸಿದೆ.

ತನಗೆ ಚಿತ್ರಹಿಂಸೆ ನೀಡಲು ಸಿಸಿಟಿವಿ ಇಲ್ಲದ ಜೈಲಿಗೆ ಸ್ಥಳಾಂತರಿಸಲು ಸುಳ್ಳು ಆಧಾರಗಳನ್ನು ಸೃಷ್ಟಿಸಲಾಗಿದೆ ಎಂಬ ಸಿಂಗ್ ಅವರ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಇ.ಡಿ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದೆ. ಇ.ಡಿ ಕಚೇರಿಯ ಜೈಲಿನಲ್ಲಿ ಕೀಟ ನಿಯಂತ್ರಣ ಕಾರ್ಯ ನಡೆಯುತ್ತಿರುವುದರಿಂದ ಸಿಂಗ್ ಅವರನ್ನು ತುಘಲಕ್ ರೋಡ್ ಪೊಲೀಸ್ ಠಾಣೆಯ ಜೈಲಿಗೆ ಸ್ಥಳಾಂತರಿಸಲು ಪ್ರಸ್ತಾಪಿಸಲಾಗಿದೆ ಎಂದು ಇ.ಡಿ ಮುಖ್ಯ ನ್ಯಾಯಾಧೀಶ ವಿಕಾಸ್ ಧುಲ್ ಅವರಿಗೆ ಅರ್ಜಿ ಸಲ್ಲಿಸಿತು. ಆದರೆ ಪ್ರಕ್ರಿಯೆ ಪೂರ್ಣಗೊಂಡ ಕಾರಣ ಇನ್ನು ಮುಂದೆ ಅದರ ಅಗತ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿತ್ತು.
ಆರೋಪಿಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸಿಂಗ್ ಪರವಾಗಿ ಸಲ್ಲಿಸಿದ ಅರ್ಜಿ ನಿರುಪಯುಕ್ತವಾಗಿದ್ದು, ಅದು ವಿಲೇವಾರಿಯಾಗಿದೆ ಎಂದು ಆದೇಶಿಸಿದ್ದಾರೆ. ಅಧಿಕಾರಿಗಳು ಸಂಜಯ್ ಅವರನ್ನು ಇ.ಡಿ ಆವರಣದಿಂದ ತುಘಲಕ್ ರೋಡ್ ಪೊಲೀಸ್ ಠಾಣೆಗೆ ಸ್ಥಳಾಂತರಿಸಲು ಪ್ರಯತ್ನಿಸಿದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಅಲ್ಲದೇ ಸಿಂಗ್ ವಕೀಲರ ಮೂಲಕ ತಮ್ಮ ಸುರಕ್ಷತೆ ಮತ್ತು ಭದ್ರತೆಯ ವಿಷಯವನ್ನು ಪ್ರಸ್ತಾಪಿಸಿದ್ದರು.
2021-22ರ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಆರೋಪದಡಿ ಸಂಜಯ್ ಅವರನ್ನು ಬುಧವಾರ ಇ.ಡಿ ಬಂಧಿಸಿದೆ. ಇವರು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಂತರ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಎರಡನೇ ಪ್ರಮುಖ ನಾಯಕರಾಗಿದ್ದಾರೆ. ಇದು ದೆಹಲಿಯ ಆಡಳಿತ ಪಕ್ಷಕ್ಕೆ ದೊಡ್ಡ ಆಘಾತ ನೀಡಿದೆ.