ಕುಂಬಳೆ: ಹಂದಿಗಳ ಹಿಂಡು ಗದ್ದೆಗೆ ನುಗ್ಗಿ ಹಾನಿ ಮಾಡುವುದರಿಂದ ಬಂಬ್ರಾಣ ಗದ್ದೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿಯ ಸುಮಾರು 500 ಎಕರೆ ಭತ್ತದ ಕೃಷಿ ಬಿಕ್ಕಟ್ಟಿನಲ್ಲಿದೆ.
ಸಮಸ್ಯೆ ಬಗೆಹರಿಸಲು ತಂತಿ ಬೇಲಿ ಅಳವಡಿಸಿ ರೈತರ ರಕ್ಷಣೆ ಮಾಡಬೇಕು ಎಂದು ಬಂಬ್ರಾಣ ಭತ್ತದ ಕೃಷಿ ಸಮಿತಿ(ಪಾಡಶೇಖರ ಸಮಿತಿ) ಪದಾಧಿಕಾರಿಗಳು ಸೋಮವಾರ ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿರುವರು.
ಈ ಪ್ರದೇಶದಲ್ಲಿ ಸಮುದಾಯ ಅರಣ್ಯ ಇಲಾಖೆ ಅಧೀನದಲ್ಲಿರುವ ವಿಂಡ್ ಫಾರಂನಲ್ಲಿ ಬೀಡು ಬಿಟ್ಟಿರುವ ಹಂದಿಗಳ ಹಿಂಡು ಬೆಳೆಗಳನ್ನು ನಾಶಪಡಿಸುತ್ತಿವೆ. ಗದ್ದೆಗಳಲ್ಲಿ ಎಡೆ ಬೆಳೆಗಳಾಗಿ ವರ್ಷಗಳ ಹಿಂದೆ ಮೆಣಸು, ವಿವಿಧ ರೀತಿಯ ತರಕಾರಿಗಳು, ಹಣ್ಣುಗಳು ಮತ್ತು ಗೆಡ್ಡೆಗಳನ್ನು ಬೆಳೆಯಲಾಗುತ್ತಿತ್ತು.ಆದರೆ ಹಂದಿ ಸಹಿತ ಕಾಡುಪ್ರಾಣಿಗಳ ತೀವ್ರ ಉಪಟಳಗಳ ಕಾರಣ ಈಗ ಸಾಧ್ಯವಾಗುತ್ತಿಲ್ಲ. ಹೆಚ್ಚುತ್ತಿರುವ ಉಪ್ಪು ನೀರು ದೊಡ್ಡ ಸಮಸ್ಯೆ ಸೃಷ್ಟಿಸಿತ್ತು. ಆದರೆ ದಿಡುಮದಲ್ಲಿ ಹೊಸ ಅಣೆಕಟ್ಟು ನಿರ್ಮಾಣದಿಂದ ಈ ಸಮಸ್ಯ ಭಾಗಶಃ ಪರಿಹಾರಗೊಂಡಿದೆ.
ಬಂಬ್ರಾಣ ಅಣೆಕಟ್ಟು ಕೂಡ ಸಾಕಾರಗೊಳ್ಳುವುದರಿಂದ ಕೃಷಿಗೆ ಅನುಕೂಲವಾಗಲಿದೆ. ಹಂದಿಗಳ ಕಾಟ ತಪ್ಪಿಸಲು ಕ್ರಮ ಕೈಗೊಂಡರೆ ಬಂಬ್ರಾಣ ಕ್ಷೇತ್ರದಲ್ಲಿ ಹೊಸ ಕೃಷಿ ಕ್ರಾಂತಿ ಸೃಷ್ಟಿಸಬಹುದು. ಈ ಕುರಿತು ಜಿಲ್ಲಾಧಿಕಾರಿ, ಕೃಷಿ ಅಧಿಕಾರಿ ಹಾಗೂ ಪಂಚಾಯಿತಿ ಅಧಿಕೃತರ ಗಮನಕ್ಕೆ ತರಲಾಗಿದ್ದು, ದೂರು ನೀಡಲಾಗಿದೆ. ತೀವ್ರ ಹವಾಮಾನ ಬದಲಾವಣೆಯು ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ಜೊತೆಗೆ ಕಾಡು ಹಂದಿಗಳ ಉಪದ್ರವ ಈಗ ಹೈರಾಣಗೊಳಿಸಿದೆ. ಚಿನ್ನ ಅಡವಿರಿಸಿ ಬ್ಯಾಂಕ್ ಸಾಲ ಮಾಡಿ ಭತ್ತದ ಕೃಷಿ ಮಾಡುವವರು ಅನೇಕರಿದ್ದಾರೆ. ಹಂದಿಗಳನ್ನು ನಿಯಂತ್ರಿಸಲು ಗುಂಡು ಹಾರಿಸಬಹುದೆಂಬ ಸರ್ಕಾರದ ಆದೇಶವಿದ್ದರೂ ಕೋವಿ ಬಳಸಲಾಗದ ಸ್ಥಿತಿ ಇದೆ. ಜೊತೆಗೆ ಕಾಡುಹಂದಿಗಳ ಹನನಕ್ಕೂ ಕಾನೂನು ತೊಡಕಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಕೃಷಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಬೇಲಿ ನಿರ್ಮಾಣಕ್ಕೆ ಬೆಂಬಲ ನೀಡಬೇಕು ಎಂದು ಭತ್ತದ ಕೃಷಿ ಸಮಿತಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರುಖ್ಮಾಕರ ಶೆಟ್ಟಿ, ಉಪಾಧ್ಯಕ್ಷ ಕಾದರ್ ದಿಡುಮ, ಮೂಸಕುಂಞÂ್ಞ, ನಾಗರಾಜ ಶೆಟ್ಟಿ, ನಿಸಾರ್ ಮೊಗರು, ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.