ಕಾಸರಗೋಡು: ಮಗುವನ್ನು ಬಾವಿಗೆಸೆದು ಕೊಲೆಗೈದ ಪ್ರಕರಣದ ಆರೋಪಿ, ಕಾಟುಕುಕ್ಕೆಯ ಪೆರ್ಲತ್ತಡ್ಕ ನಿವಾಸಿ ಬಾಬು ಎಂಬವರ ಪತ್ನಿ ಶಾರದಾ(28)ಎಂಬಾಕೆಯನ್ನು ನ್ಯಾಯಾಲಯದ ವಾರಂಟ್ ಅನ್ವಯ ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗದಿರುವುದರಿಂದ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಈಕೆ ವಿರುದ್ಧ ವಾರಂಟ್ ಹೊರಡಿಸಿತ್ತು. ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದೆ ಸಕಾಲದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವ ಷರತ್ತಿನನ್ವಯ ಜಾಮೀನು ಮಂಜೂರುಗೊಳಿಸಲಾಗಿದೆ. 2020 ಡಿಸೆಂಬರ್ 4ರಂದು ತನ್ನ ಮಗುವನ್ನು ಪೆರ್ಲತ್ತಡ್ಕದ ಬಾವಿಗೆಸೆದು ಕೊಲೆಗೈದಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡು, ಈಕೆಗೆ ಜಾಮೀನು ಮಂಜೂರುಗೊಳಿಸಿದ್ದು, ನಂತರ ಪ್ರಕರಣದ ವಿಚಾರಣೆಗೆ ಆರೋಪಿ ಹಾಜರಾಗಿರಲಿಲ್ಲ.