ಕಾಸರಗೋಡು: ಗುಜರಾತ್ ಹೈಕೋರ್ಟಿನಲ್ಲಿ ವಕೀಲೆಯಾಗಿರುವ ಕಾಸರಗೋಡು ಚಿತ್ತಾರಿಕ್ಕಲ್ ನಿವಾಸಿ, ಅಹಮ್ಮದಾಬಾದಿನಲ್ಲಿ ವಾಸಿಸುತ್ತಿರುವ ಶ್ರೀಜಾ ಗಿರೀಶ್(49)ರೈಲು ಪ್ರಯಾಣದ ಮಧ್ಯೆ ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಅಹಮ್ಮದಾಬಾದಿನ ಪೊಲೀಸರು ಕೇಸು ದಆಖಲಿಸಿಕೊಂಡಿದ್ದಾರೆ.
ಕೆಲಸದ ನಿಮಿತ್ತ ಅ. 9ರಂದು ಬೆಳಗ್ಗೆ 7.10ಕ್ಕೆ ಗುಜರಾತ್ ಎಕ್ಸ್‍ಪ್ರೆಸ್ ರೈಲಲ್ಲಿ ಮುಂಬೈಗೆ ಪ್ರಯಾಣ ಹೊರಟಿದ್ದ ಶ್ರೀಜಾ ಗಿರೀಶ್ ಅವರ ಮೊಬೈಲ್ ಮಧ್ಯಾಹ್ನ 12.30ರಿಂದ ಸ್ವಿಚ್ ಆಫ್ ಆಗಿತ್ತು. ಶ್ರೀಜಾ ಅವರು ಅ. 10ರಂದು ಮನೆಗೆ ವಾಪಸಾಗುವುದಾಗಿ ಮನೆಯವರಿಗೆ ತಿಳಿಸಿದ್ದು, ವಾಪಸಾಗದ ಹಿನ್ನೆಲೆಯಲ್ಲಿ ಇವರ ಪುತ್ರಿ ಅನುಗ್ರಹ ಅಹಮ್ಮದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀಜಾ ಕಳೆದ 25ವರ್ಷಗಳಿಂದ ಗುಜರಾತ್ ಹೈಕೋರ್ಟಿನಲ್ಲಿ ವಕೀಲೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಆರು ವರ್ಷದ ಹಿಂದೆ ಇವರ ಪತಿ ಗಿರೀಶ್ ನಿಧನರಾಗಿದ್ದು, ನಂತರ ಪುತ್ರ ಹಾಗೂ ಪುತ್ರಿಯ ಜತೆ ಅಹಮ್ಮದಾಬಾದ್‍ನಲ್ಲಿ ವಾಸಿಸುತ್ತಿದ್ದರು.
ಆರೋಪಿಯಿಂದ ಬೆದರಿಕೆ?:
ರೈಲು ಪ್ರಯಾಣದ ಮಧ್ಯೆ ನಿಗೂಢವಾಗಿ ನಾಪತ್ತೆಯಾಗಿರುವ ಶ್ರೀಜಾ ಅವರಿಗೆ ಆರೋಪಿಯೊಬ್ಬನಿಂದ ಜೀವ ಬೆದರಿಕೆಯಿದ್ದ ಬಗ್ಗೆ ಮನೆಯವರು ತಿಳಿಸಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಆರೋಪಿಯೊಬ್ಬ, ತನ್ನ ಜಾಮೀನಿಗೆ ಸಂಬಂಧಿಸಿದ ಶುಲ್ಕದ ವಿಚಾರದಲ್ಲಿ ವಕೀಲೆ ಜತೆ ವಾಗ್ವಾದ ನಡೆಸಿ, ತನ್ನ ಪರ ವಆದಿಸುವುದನ್ನು ಕೊನೆಗೊಳಿಸುವಂತೆಯೂ ತಿಳಿಸಿದ್ದನು. ತನ್ನ ಶುಲ್ಕ ನೀಡುವಂತೆ ಶ್ರೀಜಾ ಆರೋಪಿಗೆ ತಿಳಿಸಿದ್ದು, ಈ ಬಗ್ಗೆ ಆರೋಪಿ ಬಾರ್ ಕೌನ್ಸಿಲ್‍ಗೆ ದೂರೂ ನೀಡಿದ್ದನು. ಇದಾದ ನಂತರ ವಕೀಲೆ ಮನೆಗೆ ಆಗಮಿಸಿದ ಆರೋಪಿ ಜೀವ ಬೆದರಿಕೆಯೊಡ್ಡಿದ್ದು, ವಕೀಲೆ ಶ್ರೀಜಾ ಈ ಬಗ್ಗೆ ಪೊಲೀಸರಿಗೆ ದೂರನ್ನೂ ನೀಡಿದ್ದರು.