ಅಹಮದಾಬಾದ್: 'ವ್ಯಕ್ತಿಯ ಪೃಷ್ಠಕ್ಕೆ ಬಡಿಗೆಯಿಂದ 3 ರಿಂದ 6 ಏಟುಗಳನ್ನು ನಿಡುವುದು ಕಸ್ಟಡಿಯಲ್ಲಿ ನೀಡುವ ಚಿತ್ರಹಿಂಸೆಯಾಗದು. ಅಲ್ಲದೇ, ಇಂಥ ಕೃತ್ಯವನ್ನು ಪೊಲೀಸ್ ಕಸ್ಟಡಿಯಲ್ಲಿನ ಚಿತ್ರಹಿಂಸೆ ಜೊತೆ ಹೋಲಿಸಲಾಗದು' ಎಂದು ನಾಲ್ವರು ಪೊಲೀಸರು ಗುಜರಾತ್ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಗುಜರಾತ್‌ನ ಖೇಡಾ ಜಿಲ್ಲೆಯ ಉಂಡೇಲಾ ಗ್ರಾಮದಲ್ಲಿ 2022ರ ಅಕ್ಟೋಬರ್ 4ರಂದು ಮೂವರು ಮುಸ್ಲಿಂ ವ್ಯಕ್ತಿಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಕೃತ್ಯದಲ್ಲಿ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ನಾಲ್ವರು ಪೊಲೀಸರು ಈ ಪ್ರಮಾಣಪತ್ರ ಸಲ್ಲಿಸಿದ್ದಾರೆ.
'ಅರ್ಜಿದಾರರ ಪೃಷ್ಠದ ಮೇಲೆ ಬಡಿಗೆಗಳಿಂದ ಹೊಡೆಯುವುದನ್ನು ಒಪ್ಪಲಾಗದಿದ್ದರೂ ಇದನ್ನು ಕಸ್ಟಡಿಯಲ್ಲಿ ನೀಡಿದ ಚಿತ್ರಹಿಂಸೆ ಎನ್ನಲಾಗದು' ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಕೂಡದು ಎಂಬ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಡಿ, ಇನ್‌ಸ್ಪೆಕ್ಟರ್ ಎ.ವಿ. ಪಾರ್ಮಾರ್, ಸಬ್‌ಇನ್‌ಸ್ಪೆಕ್ಟರ್ ಡಿ.ಬಿ. ಕುಮಾವತ್, ಇಬ್ಬರು ಕಾನ್‌ಸ್ಟೆಬಲ್‌ಗಳಾದ ಕೆ.ಎಲ್. ದಾಭಿ ಮತ್ತು ಆರ್.ಆರ್. ದಾಭಿ ವಿರುದ್ಧ ನ್ಯಾಯಧೀಶರಾದ ಎ.ಎಸ್. ಸುಪೆಹಿಯ ಮತ್ತು ಎಂ.ಆರ್ ಮೆಂಗ್ಡೆ ಅವರಿದ್ದ ವಿಭಾಗೀಯ ಪೀಠವು ಆರೋಪ ಹೊರಿಸಿದೆ.
ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಬುಧವಾರ ನಡೆಯಲಿದೆ.