ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಹಂಗಾಮಿ ಡೀನ್ ಹಾಗೂ ಮಕ್ಕಳ ತಜ್ಞರ ವಿರುದ್ಧ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 304 (ಉದ್ದೇಶಪೂರ್ವಕವಲ್ಲದ ನರಹತ್ಯೆ) ಹಾಗೂ 34ರ (ಅಪರಾಧ ಸಂಚು) ಅಡಿ ಪ್ರಕರಣ ದಾಖಲಾಗಿದೆ.
'ನನ್ನ ಪುತ್ರಿ ಹಾಗೂ ಆಕೆಯ ನವಜಾತ ಶಿಶುವಿನ ಸಾವಿಗೆ ಡಾ.ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಂಗಾಮಿ ಡೀನ್ ಎಸ್.ಆರ್. ವಾಕೋಡೆ ಹಾಗೂ ಮಕ್ಕಳ ತಜ್ಞ ಕಾರಣವೆಂದು ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಏನಿದೆ?:
'ನನ್ನ ಪುತ್ರಿ ಅಂಜಲಿಯನ್ನು ಸೆಪ್ಟೆಂಬರ್ 30ರಂದು ರಾತ್ರಿ 8 ಗಂಟೆಗೆ ಹೆರಿಗೆಗಾಗಿ ಆಸ್ಪತ್ರೆಗೆ ಕರೆತಂದು ದಾಖಲಿಸಿದೆ. ಅಕ್ಟೋಬರ್ 1ರ ಮಧ್ಯರಾತ್ರಿ 1 ಗಂಟೆಗೆ ಹೆಣ್ಣುಮಗುವಿಗೆ ಜನ್ಮವಿತ್ತಳು. ಬಳಿಕ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವ ಬಗ್ಗೆ ವೈದ್ಯರು ನನಗೆ ಮಾಹಿತಿ ನೀಡಿದರು' ಎಂದು ಮೃತ ಬಾಣಂತಿಯ ತಂದೆ ಕಾಮಾಜಿ ತೋಂಪೆ ದೂರಿನಲ್ಲಿ ತಿಳಿಸಿದ್ದಾರೆ.
'ಬೆಳಿಗ್ಗೆ ಆಕೆಗೆ ರಕ್ತಸ್ರಾವ ಶುರುವಾಯಿತು. ಮಗುವಿನ ಆರೋಗ್ಯದಲ್ಲೂ ವ್ಯತ್ಯಾಸ ಕಾಣಿಸಿಕೊಂಡಿತು. ಔಷಧಿಗಳು, ರಕ್ತದ ಬಾಟಲಿ ಸೇರಿದಂತೆ ಅಗತ್ಯ ವಸ್ತುಗಳನ್ನು ಆಸ್ಪತ್ರೆಯ ಹೊರಗಡೆಯಿಂದ ತರುವಂತೆ ವೈದ್ಯರು ಸೂಚಿಸಿದರು. ₹ 45 ಸಾವಿರ ಮೌಲ್ಯದ ಔಷಧಿ ಸಾಮಗ್ರಿಗಳನ್ನು ತಂದಾಗ ವಾರ್ಡ್‌ನಲ್ಲಿ ವೈದ್ಯರೇ ಇರಲಿಲ್ಲ' ಎಂದು ದೂರಿದ್ದಾರೆ.
'ನನ್ನ ಪುತ್ರಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ವಾಕೋಡೆ ಅವರು, ವೈದ್ಯರು ಅಥವಾ ನರ್ಸ್ ಅನ್ನು ವಾರ್ಡ್‌ಗೆ ಕಳುಹಿಸಲಿಲ್ಲ. ಉದ್ದೇಶಪೂರ್ವಕವಾಗಿಯೇ ಈ ರೀತಿ ನಡೆದುಕೊಂಡಿದ್ದಾರೆ' ಎಂದು ಆಪಾದಿಸಿದ್ದಾರೆ.
'ಅಕ್ಟೋಬರ್ 2ರ ಬೆಳಿಗ್ಗೆ 6 ಗಂಟೆಗೆ ಮಗು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ ವೈದ್ಯರು ಮೃತದೇಹವನ್ನು ನಮಗೆ ಹಸ್ತಾಂತರಿಸಿದರು. ಅಕ್ಟೋಬರ್ 4ರ ಬೆಳಿಗ್ಗೆ 10.30ಕ್ಕೆ ಅಂಜಲಿ ಮೃತಪಟ್ಟಿರುವುದಾಗಿ ತಿಳಿಸಿದರು' ಎಂದು ಹೇಳಿದ್ದಾರೆ.
'ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಔಷಧಿ ಕೊರತೆಯಿಂದ ನನ್ನ ಕಣ್ಮುಂದೆಯೇ ಹಲವು ಜನರು ಮೃತಪಟ್ಟರು' ಎಂದು ದೂರಿನಲ್ಲಿ ವಿವರಿಸಿದ್ದಾರೆ.