ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪೀಠಾರೋಹಣದ ತೃತೀಯ ವರ್ಷಾಚರಣೆಯ ಸಂದರ್ಭದಲ್ಲಿ ಮಾನ್ಯದ ಶಿಷ್ಯವೃಂದದವರಿಂದ ಗುರುವಂದನೆ ಕಾರ್ಯಕ್ರಮ ಜರಗಿತು. ಕಹಳೆ ವಾಹಿನಿಯ ಮುಖ್ಯಸ್ಥ ಶ್ಯಾಮಸುದರ್ಶನ ಹೊಸಮೂಲೆ ಮಾತನಾಡಿ ಶ್ರೇಷ್ಠವಾದ ಪಥದಲ್ಲಿ ಶ್ರೀಗಳು ಮುನ್ನಡೆಯುತ್ತಿದ್ದಾರೆ. ಮೇರು ವ್ಯಕ್ತಿತ್ವದಿಂದ ಹಿರಿಯ ಗುರುಗಳು ಅಸಾಮಾನ್ಯ ಸಾಧನೆಯನ್ನು ಮಾಡಿದ್ದು, ಪೂಜ್ಯ ಸಚ್ಚಿದಾನಂದ ಭಾರತೀ ಶ್ರೀಗಳು ಅದನ್ನು ಲೋಕೋತ್ತರವಾಗಿ ಬೆಳಗಿಸುವಂತಹ ಕೆಲಸವನ್ನು ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ ತರುವಂತಹ ವಿಚಾರವಾಗಿದೆ. ಮಾನ್ಯದ ಶಿಷ್ಯವೃಂದವು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಮಾನ್ಯವೆಂಬ ಸ್ಥಳದಲ್ಲಿ ಅನೇಕ ಯಕ್ಷಗಾನ ಕಾರ್ಯಕ್ರಮಗಳು ನಡೆದಿವೆ. ಯಕ್ಷಗಾನಕ್ಕೂ ಶ್ರೀಮಠಕ್ಕೂ ಮಾನ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.
ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಮಾತನಾಡಿದರು. ವಿಜಯಕುಮಾರ್ ಮಾನ್ಯ, ಶ್ಯಾಮಪ್ರಸಾದ ಮಾನ್ಯ, ಮಹೇಶ್ ವಳಕ್ಕುಂಜ, ಸಂತೋಷ್ ಕುಮಾರ್ ಮಾನ್ಯ, ಸುಂದರ ಶೆಟ್ಟಿ ಕೊಲ್ಲಂಗಾನ, ರಾಮ ಕೆ.ಕಾರ್ಮಾರು ನೇತೃತ್ವದಲ್ಲಿ ಗುರುವಂದನೆ ಸಲ್ಲಿಸಲಾಯಿತು. ಕಯ್ಯೂರು ನಾರಾಯಣÀ್ಭಟ್ ನಿರೂಪಿಸಿದರು. ಮಾನ್ಯ ವಲಯ ಸಮಿತಿಯ ವತಿಯಿಂದ ಯಕ್ಷಗಾನ ಬಯಲಾಟ ಗದಾಯುದ್ಧ ಪ್ರದರ್ಶನಗೊಂಡಿತು.
ಶ್ರೀಗಳಿಂದ ಆಶೀರ್ವಚನ :
ಮಾನ್ಯಕ್ಕೂ ಎಡನೀರಿಗೂ ನಿಕಟವಾದ ಸಂಬಂಧವಿದೆ. ಕಾಸರಗೋಡು ಜಿಲ್ಲೆಯಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಬೆಂಬಲವನ್ನು ನೀಡಿದವರು ಮಾನ್ಯದವರು ಎಂದರೆ ತಪ್ಪಾಗಲಾರದು. ಕಲಾಸಕ್ತರ ತಂಡವು ಧಾರ್ಮಿಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
- ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಎಡನೀರು ಮಠ