ಕೊಚ್ಚಿ: ಇತ್ತೀಚಿನ ದಿನಗಳಲ್ಲಿ ಸಾಲದ ಆಯಪ್ಗಳು ಮತ್ತು ರಮ್ಮಿಯಂತಹ ಆನ್ಲೈನ್ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್ಲೈನ್ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಮನೆ, ಜಮೀನು ಮಾರಿಕೊಂಡು ಬೀದಿಗೆ ಬಿದ್ದಿದ್ದಾರೆ.
ಕೇರಳದಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರು ಆನ್ಲೈನ್ ವಂಚನೆ ಜಾಲಕ್ಕೆ ಸಿಲುಕಿ 99 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಕ್ರೆಡಿಟ್ ಕಾರ್ಡ್ ನವೀಕರಣ ಮಾಡಿಕೊಡುತ್ತೇವೆ ಎಂದು ನಂಬಿಸಿ ಮಲಕಾಲ್ ಮೂಲದ ಯುವಕನಿಗೆ ವಂಚನೆ ಮಾಡಿದ್ದಾರೆ. ಯುವಕ ವಿದೇಶದಿಂದ ತವರಿಗೆ ಬಂದಿದ್ದ. ಆತನಿಗೆ ಕರೆ ಮಾಡಿ ಎಸ್ಬಿಐ ಕಡೆಯಿಂದ ಎಂದು ಹೇಳಿದ್ದಾರೆ. ನಿಮ್ಮ ಕ್ರೆಡಿಟ್ ಕಾರ್ಡ್ ಕಾಲಾವಧಿ ಮುಕ್ತಾಯವಾಗುತ್ತಿದೆ ಮತ್ತು ಅದನ್ನು ನವೀಕರಿಸಬೇಕಿದೆ ಮಾಹಿತಿ ಕೊಡಿ ಎಂದು ಕೇಳಿದ್ದಾರೆ. ಪೂರ್ವಾಪರ ಯೋಚಿಸದ ಯುವಕ ಮಾಹಿತಿ ನೀಡಿದ್ದಲ್ಲದೆ, ಒಟಿಪಿ ನಂಬರ್ ಸಹ ನೀಡಿದ್ದಾನೆ. ಇದಾದ ಮರಕ್ಷಣವೇ ಯುವಕ ತನ್ನ ಖಾತೆಯಿಂದ 99 ಸಾವಿರ ರೂ. ಹಣ ಕಳೆದುಕೊಂಡಿದ್ದಾನೆ.
ಸದ್ಯ ರಾಜಾಪುರಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಕರೆಗಳನ್ನು ಬ್ಯಾಂಕ್‌ಗಳಿಂದ ಸ್ವೀಕರಿಸುತ್ತಿದ್ದರಿಂದ ಸಂತ್ರಸ್ತ ಯುವಕನಿಗೆ ಆರಂಭದಲ್ಲಿ ಅನುಮಾನಾಸ್ಪದವಾಗಿ ಏನೂ ಕಾಣಲಿಲ್ಲ. ಆದರೆ, ಸಂಬಂಧಪಟ್ಟ ಬ್ಯಾಂಕ್ ಶಾಖೆಗಳ ಅಧಿಕೃತ ಸಂಖ್ಯೆಗಳನ್ನು ಹೊರತುಪಡಿಸಿ ಬರುವ ಕರೆಗಳನ್ನು ನಂಬಬಾರದು ಮತ್ತು ಯಾವುದೇ ಸಂದರ್ಭದಲ್ಲೂ ಕರೆ ಮಾಡಿದವರಿಗೆ ಒಟಿಪಿ ನೀಡಬಾರದು ಎಂದು ಬ್ಯಾಂಕ್ ಅಧಿಕಾರಿಗಳು ಎಚ್ಚರಿಕೆ ನೀಡಿದರೂ ಯುವಕ ವಂಚನೆ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾನೆ.
ಸ್ಕೂಟರ್ ಲೋನ್ ಆಸೆಗೆ 50 ಸಾವಿರ ಲಾಸ್
ಇನ್ನೊಂದು ಪ್ರಕರಣದಲ್ಲಿ ಒಲಾ ಕಂಪನಿಯ ಹೆಸರಲ್ಲಿ 50 ಸಾವಿರ ರೂ. ವಂಚನೆ ಮಾಡಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಲೋನ್ ದೊರೆಯುತ್ತದೆ ಅಂತ ಥ್ರಿಕರಿಪುರ್ ಇಲಂಬಾಚಿ ನಿವಾಸಿಗೆ ಕರೆ ಮಾಡಿ, ಆತನಿಂದ ಕಂತುಗಳ ರೂಪದಲ್ಲಿ 50 ಸಾವಿರ ರೂ. ಕಟ್ಟಿಸಿಕೊಂಡು ಕೊನೆಗೆ ಕೈಕೊಟ್ಟಿದ್ದಾರೆ.
ಉದ್ಯೋಗದ ಆಸೆಗೆ 5.5 ಲಕ್ಷ ರೂ. ನಷ್ಟ
ಮೇಲ್ಪರಂಬು ಚೆಂಬರಿಕಾ ಮೂಲದ ಮಹಿಳೆಯೊಬ್ಬರು ಗೂಗಲ್ ಮ್ಯಾಪ್‌ನಲ್ಲಿನ ತಪ್ಪುಗಳನ್ನು ಪರಿಹರಿಸಿದ ಬಳಿಕ ಉದ್ಯೋಗ ನೀಡುವ ಭರವಸೆ ನೀಡಿ 5,50,000 ರೂ. ವಂಚನೆ ಎಸಗಲಾಗಿದೆ. ವಿದೇಶಿ ಉದ್ಯೋಗಕ್ಕಾಗಿ ನಿರ್ದಿಷ್ಟ ಮೊತ್ತವನ್ನು ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡುವಂತೆ ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಮೊದಲ ಹಂತದಲ್ಲಿ ಹಣವನ್ನು ನೀಡಿದ್ದಾಳೆ. ಹೀಗೆ ಐದೂವರೆ ಲಕ್ಷ ರೂ. ಹಣವನ್ನು ಮಹಿಳೆ ಕಳೆದುಕೊಂಡಿದ್ದಾಳೆ.
ಒಂದೇ ಕ್ಲಿಕ್ಗೆ 50 ಸಾವಿರ ನಷ್ಟ
ಧನಿ (Dhani) ಹೆಸರಿನ ಲೋನ್ ಆಯಪ್ ಅನ್ನು ಯುವಕನೊಬ್ಬ ತನ್ನ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದು. ಒಂದೇ ಕ್ಲಿಕ್ಗೆ ಲಕ್ಷಾಂತರ ರೂಪಾಯಿ ಲೋನ್ ದೊರೆಯುತ್ತದೆ ಎಂದು ನಂಬಿಸಲಾಗಿತ್ತು. ಆದರೆ, ತಾನೂ ಆನ್ಲೈನ್ ವಂಚನೆ ಜಾಲಕ್ಕೆ ಸಿಲುಕಿದ್ದೇನೆ ಎಂಬುದು ಯುವಕನಿಗೆ ಗೊತ್ತಿರಲಿಲ್ಲ. ಆಯಪ್ ಇನ್ಸ್ಟಾಲ್ ಮಾಡಿಕೊಂಡ ಕೂಡಲೇ ಲೋನ್ ಪ್ರೊಸೆಸಿಂಗ್ ಶುಲ್ಕ ಎಂದು 58,560 ರೂಪಾಯಿ ಕೇಳಲಾಗಿತ್ತು. ಅನೇಕ ವಾಟ್ಸ್ಆಯಪ್ ಚಾಟ್ಸ್ ಮತ್ತು ಸಾಕಷ್ಟು ಕರೆಗಳು ಬಂದಿದ್ದರಿಂದ ಅವರ ಮಾತನ್ನು ನಂಬಿದ ಯುವಕ ಹಣ ಪಾವತಿಸಿದ್ದ. ಇದಾದ ಬಳಿಕ ಆಯಪ್ ನಿರ್ವಾಹಕರೊಂದಿಗೆ ಸಂಪರ್ಕವೇ ಕಡಿತಗೊಂಡಿತು. ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ಯುವಕ ಅಂಬಾಲತಾರಾ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಫೋನ್ ನಂಬರ್ಗಳನ್ನು ನೀಡಿ ದೂರು ದಾಖಲಿಸಿದ್ದಾರೆ.