ನವದೆಹಲಿ: ನೌಕೆ ವಿಫಲಗೊಂಡರೂ ಒಳಗಿರುವ ಗಗನಯಾನಿಗಳು ಸುರಕ್ಷಿತವಾಗಿ ಹೊರ ಬರುವ ಪರೀಕ್ಷಾರ್ಥ ಪ್ರಯೋಗವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ಇಂದು ಶನಿವಾರ ಬೆಳಿಗ್ಗೆ 7.30ಕ್ಕೆ ನಡೆಸಲಿದೆ.
ಚಂದ್ರಯಾನ-3 ಯೋಜನೆಯ ಸಂದರ್ಭದಲ್ಲೂ ನಡೆಸಿದ್ದ ಇಂಥದ್ದೊಂದು ಪರೀಕ್ಷಾರ್ಥ ಪ್ರಯೋಗವು ಇಸ್ರೊಗೆ ಯಶಸ್ಸು ತಂದುಕೊಟ್ಟಿತ್ತು. ಇದರ ಫಲವಾಗಿ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿಯಲು ಸಾಧ್ಯವಾಯಿತು. ಇದೀಗ ಬಾಹ್ಯಾಕಾಶ ಯೋಜನೆಯ ಮುಂದುವರಿದ ಭಾಗವಾಗಿ ಇಸ್ರೊ ಕೈಗೊಳ್ಳುತ್ತಿರುವ ಗಗನಯಾನ ಯೋಜನೆಯಲ್ಲಿ ಗಗನಯಾತ್ರಿಗಳ ಸುರಕ್ಷತೆಗಾಗಿ ಈ ಪ್ರಯೋಗ ಶನಿವಾರ ನಡೆಯಲಿದೆ. ಇದರ ನೇರ ಪ್ರಸಾರಕ್ಕೆ ಇಸ್ರೊ ವ್ಯವಸ್ಥೆ ಮಾಡಿದೆ.
'ಗಗಯಾನದ ಉಡ್ಡಯನ ಸಂದರ್ಭದಲ್ಲಿ ನೌಕೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದಲ್ಲಿ, ಒಳಗಿರುವ ಗಗನಯಾನಿಗಳು ಸುರಕ್ಷಿತವಾಗಿ ಹೊರಬರುವ ವ್ಯವಸ್ಥೆಯ ಪರೀಕ್ಷೆಯನ್ನು ಶನಿವಾರ ನಡೆಸಲಾಗುವುದು. ಈ ಪ್ರಯೋಗವು ಮಾನವ ರಹಿತವಾಗಿರಲಿದೆ. ಪ್ರತಿಕೃತಿ ಇದರಲ್ಲಿರಲಿದೆ' ಎಂದು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಉನ್ನಿಕೃಷ್ಣನ್ ನಾಯರ್ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
'ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಹಾಶ ಕೇಂದ್ರದಿಂದ ಉಡ್ಡಯನಗೊಳ್ಳುವ ರಾಕೇಟ್ 12 ಕಿ.ಮೀ. ಎತ್ತರಕ್ಕೆ ಹಾರಲಿದೆ. ಒಂದು ಬಾರಿ ಟ್ರಾನ್ಸಾನಿಕ್ ಹಂತ ತಲುಪಿದ ನಂತರ ನೌಕೆಯು ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ. ನಂತರ ಗಗನಯಾನಿಗಳನ್ನು ಸುರಕ್ಷಿತವಾಗಿ ಹೊರತರುವ ಮೋಟಾರು ತನ್ನ ಕಾರ್ಯ ಆರಂಭಿಸಲಿದೆ. ಇವೆಲ್ಲವೂ ಸ್ವಯಂಚಾಲಿತವಾಗಿರಲಿದೆ. ನೌಕೆಯು ತನ್ನ ಕಾರ್ಯಾಚರಣೆಯಲ್ಲಿ ವಿಫಲಗೊಂಡಾಗ, ಎಸ್ಕೇಪ್ ಸಿಸ್ಟಂ ತಾನಾಗಿಯೇ ಗಗನಯಾನಿಗಳನ್ನು ಸುರಕ್ಷಿತವಾಗಿ ಹೊರಕ್ಕೆ ತರಲಿದೆ. ನಂತರ ಪ್ಯಾರಾಚೂಟ್ ಮೂಲಕ ಉಡ್ಡಯನ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ ನಿಧಾನವಾಗಿ ಬಂದಿಳಿಯಲಿದೆ' ಎಂದು ವಿವರಿಸಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆ 9 ನಿಮಿಷಗಳದ್ದಾಗಿರಲಿದೆ. 2025ರಲ್ಲಿ ಮಾನವ ಸಹಿತ ಗಗನಯಾನ ಯೋಜನೆ ನಡೆಯಲಿದೆ. ಇದರಲ್ಲಿ ಮೂರು ಗಗನಯಾತ್ರಿಗಳು ಪ್ರಯಾಣಿಸಬಹುದಾಗಿದೆ. ಮೂರು ದಿನಗಳ ಕಾರ್ಯಾಚರಣೆಯಲ್ಲಿ 400 ಕಿ.ಮೀ.ಯನ್ನು ಇವರು ಸಂಚರಿಸಿ ನಂತರ ಸುರಕ್ಷಿತವಾಗಿ ಭಾರತ ಸುತ್ತಲಿನ ಸಮುದ್ರದಲ್ಲಿ ಬಂದಿಳಿಯುವುದೇ ಈ ಯೋಜನೆಯಾಗಿದೆ.