ಕಾಸರಗೋಡು: ಚುನಾವಣಾ ಮತದಾರರಪಟ್ಟಿಗೆ ಹೆಸರು ಸಎರ್ಪಡೆ ಸಂದರ್ಭ ಉಪ ತಹಸೀಲ್ದಾರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸೇರಿದಂತೆ ನಾಲ್ವರಿಗೆ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ(ದ್ವಿತೀಯ) ಒಂದು ವರ್ಷ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಶಾಸಕ ಎ.ಕೆ.ಎಂ ಅಶ್ರಫ್, ಅಬ್ದುಲ್ ಖಾದರ್, ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅಬ್ದುಲ್ಲ ಕಜೆ, ಬಶೀರ್ ಕನಿಲ ಎಂಬವರಿಗೆ ಈ ಶಿಕ್ಷೆ. ವಿವಿಧ ಸೆಕ್ಷನ್ ಅನ್ವಯ ಒಂದು ವರ್ಷ ಮೂರು ತಿಂಗಳು ಜೈಲು ಶಿಕ್ಷೆ ಮತ್ತು 20ಸಾವಿರ ರೂ. ದಂಡ ವಿಧಿಸಲಾಗಿದ್ದು, ಶಿಕ್ಷೆ ಒಟ್ಟಾಗಿ ಅನುಭವಿಸಿದರೆ ಸಾಕೆಂದು ನ್ಯಾಯಾಲಯ ಸೂಚಿಸಿದೆ.
2015 ನವೆಂಬರ್ 25ರಂದು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ಘಟನೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮೈಸೂರು ನಿವಾಸಿ, ಬಂಗ್ರಮಂಜೇಶ್ವರದಲ್ಲಿ ವಾಸ್ತವ್ಯವಿದ್ದ ಮುನಾವರ್ ಎಂಬವರ ಹೆಸರನ್ನು ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಿಲೇವಾರಿ ಸಂದರ್ಭ ಉಪ ತಹಸೀಲ್ದಾರ್ ಎ. ದಾಮೋದರನ್ ಅವರು, ಮೈಸೂರಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆರವುಗೊಳಿಸಿರುವ ಬಗ್ಗೆ ದಾಖಲೆ ಸಲ್ಲಿಸುವಂತೆ ಕೋರಿ ಅರ್ಜಿ ಪ್ರತ್ಯೇಕವಾಗಿ ತೆಗೆದಿರಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಎ.ಕೆ.ಎಂ ಅಶ್ರಫ್ ಹಾಗೂ ಇತರ ಮೂವರು ಈ ಬಗ್ಗೆ ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳ ಜತೆ ವಾಗ್ವಾದಕ್ಕಿಳಿದಿದ್ದು, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವುದಲ್ಲದೆ, ಕುರ್ಚಿ ಎತ್ತಿ ಎಸೆದಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.