ವಾಷಿಂಗ್ಟನ್: 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್'ನ ಘೋಷಣೆಯು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ಈಚೆಗೆ ನಡೆಸಿದ ಭಯೋತ್ಪಾದಕ ದಾಳಿಗೆ ಒಂದು ಕಾರಣ ಎಂದು ತಮಗೆ ಬಲವಾಗಿ ಅನಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ನವದೆಹಲಿಯಲ್ಲಿ ಈಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ ಈ ಕಾರಿಡಾರ್ ಯೋಜನೆಯ ಘೋಷಣೆ ಆಗಿದೆ.
ಹಮಾಸ್ ದಾಳಿಯ ನಂತರದಲ್ಲಿ ಇಸ್ರೇಲ್ ಭಾರಿ ಪ್ರಮಾಣದಲ್ಲಿ ಪ್ರತಿದಾಳಿ ನಡೆಸುತ್ತಿದೆ. ಅಮೆರಿಕಕ್ಕೆ ಬಂದಿರುವ ಆಸ್ಟ್ರೇಲಿಯಾ ಪ್ರಧಾನಿ ಆಯಂಟನಿ ಆಲ್ಬನೀಸ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೈಡನ್ ಅವರು, ಈ ಮಾತಿಗೆ ಪೂರಕವಾಗಿ ತಮ್ಮ ಬಳಿ ಆಧಾರ ಇಲ್ಲದಿದ್ದರೂ ತಮಗೆ ಬಲವಾಗಿ ಅನಿಸಿರುವುದನ್ನು ಹೇಳುತ್ತಿರುವುದಾಗಿ ತಿಳಿಸಿದ್ದಾರೆ.
'ಇಸ್ರೇಲ್ ಅನ್ನು ಆ ಪ್ರದೇಶದೊಂದಿಗೆ ಬೆಸೆಯುವ ಹಾಗೂ ಒಟ್ಟಾರೆಯಾಗಿ ಇಡೀ ಪ್ರದೇಶವನ್ನು ಬೆಸೆಯುವ ದಿಕ್ಕಿನಲ್ಲಿ ನಾವು ಸಾಧಿಸಿದ ಪ್ರಗತಿಯು ಈ ದಾಳಿಗೆ ಕಾರಣ ಎಂದು ನನಗೆ ಅನಿಸಿದೆ. ಆದರೆ, ಈ ಕೆಲಸವನ್ನು ನಾವು ಹಿಂದೆ ಬಿಡಲಾಗದು' ಎಂದು ಬೈಡನ್ ಅವರು ಹೇಳಿದ್ದಾರೆ.
ಹಮಾಸ್ ಬಂಡುಕೋರರು ನಡೆಸಿರುವ ಭಯೋತ್ಪಾದಕ ದಾಳಿಗೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ) ಒಂದು ಕಾರಣವಾಗಿರಬಹುದು ಎಂದು ಬೈಡನ್ ಅವರು ಒಂದು ವಾರದ ಅವಧಿಯಲ್ಲಿ ಎರಡನೆಯ ಬಾರಿ ಹೇಳಿದ್ದಾರೆ.
ಈ ಆರ್ಥಿಕ ಕಾರಿಡಾರ್ ಯೋಜನೆಯನ್ನು ಹಲವರು ಚೀನಾದ ಬೆಲ್ಟ್ ಆಯಂಡ್ ರೋಡ್ ಯೋಜನೆಗೆ ಪರ್ಯಾಯ ಎಂದು ಭಾವಿಸಿದ್ದಾರೆ. ಈ ಯೋಜನೆಯನ್ನು ಅಮೆರಿಕ, ಭಾರತ, ಸೌದಿ ಅರೇಬಿಯಾ, ಯುಎಇ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಐರೋಪ್ಯ ಒಕ್ಕೂಟದ ನಾಯಕರು ಸೆಪ್ಟೆಂಬರ್‌ನಲ್ಲಿ ಜಂಟಿಯಾಗಿ ಘೋಷಿಸಿದ್ದಾರೆ.
ಭಾರತವನ್ನು ಕೊಲ್ಲಿ ಪ್ರದೇಶದೊಂದಿಗೆ ಜೋಡಿಸುವ ಪೂರ್ವ ಕಾರಿಡಾರ್ ಹಾಗೂ ಕೊಲ್ಲಿ ಪ್ರದೇಶವನ್ನು ಯುರೋಪ್ ಜೊತೆಗೆ ಬೆಸೆಯುವ ಉತ್ತರ ಕಾರಿಡಾರ್ ಈ ಯೋಜನೆಯ ಭಾಗ.