ಕೊಚ್ಚಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿತ್ಯ ನೂರಕ್ಕೂ ಹೆಚ್ಚು ಸೈಬರ್ ದಾಳಿಗಳ ವಿರುದ್ಧ ಹೋರಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದರು.
ನಗರದಲ್ಲಿ ಅಂತಾರಾಷ್ಟ್ರೀಯ ಸೈಬರ್ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿ, ರಾಕೆಟ್ ತಂತ್ರಜ್ಞಾನದಲ್ಲಿ ಬಳಸುವ ಅಲ್ಟ್ರಾಟೆಕ್ ಆಧುನಿಕ ಸಾಫ್ಟ್ ವೇರ್ ಮತ್ತು ಚಿಪ್ ಬೇಸ್ಡ್ ಹಾರ್ಡ್‍ವೇರ್ ಮೇಲೆ ಸೈಬರ್ ದಾಳಿ ಹೆಚ್ಚಾಗಿ ನಡೆಯುತ್ತಿದೆ.
ಸಾಫ್ಟ್‍ವೇರ್ ಮಾತ್ರವಲ್ಲದೆ ರಾಕೆಟ್‍ಗಳೊಳಗಿನ ಹಾರ್ಡ್‍ವೇರ್ ಚಿಪ್‍ಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೈಬರ್ ದಾಳಿಯಿಂದ ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಸಂಶೋಧನೆಗಳು ನಡೆಯುತ್ತಿವೆ. ಉಪಗ್ರಹವನ್ನು ನಿಯಂತ್ರಣ ಮಾಡುವ ವಿಧಾನವು ಒಂದೇ ಸಮಯದಲ್ಲಿ ಅನೇಕ ಉಪಗ್ರಹಗಳನ್ನು ನಿಯಂತ್ರಿಸುವ ಸಾಫ್ಟ್ ವೇರ್ ವಿಧಾನವಾಗಿ ಬದಲಾಗಿದೆ. ಇದು ಈ ವಲಯದ ಮಹತ್ವದ ಬೆಳವಣಿಗೆಯನ್ನು ಸೂಚಿಸುತ್ತದೆ. ಇಂದು ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಸಹಾಯ ಮಾಡುವ ಉಪಗ್ರಹಗಳು ಸಹ ಇದಕ್ಕೆ ಹೊರತಾಗಿಲ್ಲ. ಇವೆಲ್ಲವನ್ನೂ ವಿವಿಧ ರೀತಿಯ ಸಾಫ್ಟ್ ವೇರ್ಗಳಿಂದ ನಿಯಂತ್ರಿಸಲಾಗುತ್ತದೆ. ಇವೆಲ್ಲವನ್ನೂ ರಕ್ಷಿಸಲು ಸೈಬರ್ ಸುರಕ್ಷತೆ ಬಹಳ ಮುಖ್ಯ ಎಂದು ಅವರು ಹೇಳಿದರು.
ಸುಧಾರಿತ ತಂತ್ರಜ್ಞಾನವು ಒಂದು ವರದಾನವಾಗಿದೆ. ಇದೇ ವೇಳೆ ಅದು ಬೆದರಿಕೆಗೂ ಕಾರಣವಾಗಿದೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಒಡ್ಡುವ ಸವಾಲುಗಳನ್ನು ನಾವು ಅದೇ ತಂತ್ರಜ್ಞಾನದಿಂದ ಎದುರಿಸಬಹುದು. ಈ ನಿಟ್ಟಿನಲ್ಲಿ ಸಂಶೋಧನೆ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.