ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಟೀಕಿಸಿದ್ದಾರೆ. ಮುಖ್ಯಮಂತ್ರಿಗಳು ನೇರವಾಗಿ ರಾಜ್ಯಪಾಲರನ್ನು ಭೇಟಿಯಾಗಿ ಆಡಳಿತಾತ್ಮಕ ವಿಷಯಗಳ ಬಗ್ಗೆ ವಿವರಣೆ ನೀಡಲು ರಾಜಭವನಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ಆಡಳಿತಾತ್ಮಕ ವಿಚಾರಗಳನ್ನು ನೇರವಾಗಿ ತಿಳಿಸುವುದು ಸಾಂವಿಧಾನಿಕ ಜವಾಬ್ದಾರಿಯಾಗಿದೆ.ಅಕ್ರಮ ಹಾಗೂ ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸುವ ವಿಧೇಯಕಗಳಿಗೆ ಸಹಿ ಹಾಕುವಂತಿಲ್ಲ ಎಂದ ರಾಜ್ಯಪಾಲರು, ರಾಜಭವನಕ್ಕೆ ಸಚಿವರು, ಅಧಿಕಾರಿಗಳು ಬರುವುದರಲ್ಲಿ ಏನು ಪ್ರಯೋಜನ ಎಂದರು.
ವಿಶ್ವವಿದ್ಯಾನಿಲಯಗಳಲ್ಲಿನ ವಿವಿಗಳ ಅಧಿಕಾರವನ್ನು ಸರ್ಕಾರ ತನ್ನ ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಪಕ್ಷದ ತೀರ್ಮಾನವನ್ನೇ ಮುಖ್ಯಮಂತ್ರಿ ಜಾರಿಗೆ ತರುತ್ತಿದ್ದಾರೆ ಎಂದು ರಾಜ್ಯಪಾಲರು ಟೀಕಿಸಿದರು. ಸರ್ಕಾರ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ. ಇದು ಪ್ರಮಾಣ ವಚನ ಉಲ್ಲಂಘನೆಯಾಗಿದೆ. ಕರಿವನ್ನೂರು ಸಹಕಾರಿ ಬ್ಯಾಂಕ್ ಅವ್ಯವಹಾರದ ಬಗ್ಗೆ ದೂರು ಬಂದರೆ ವಿವರಣೆ ಪಡೆಯುವುದಾಗಿಯೂ ರಾಜ್ಯಪಾಲರು ತಿಳಿಸಿದ್ದಾರೆ.
ರಾಜ್ಯಪಾಲರು ವಿಧೇಯಕಗಳಿಗೆ ಅಂಕಿತ ಹಾಕದೆ ವಿಳಂಬ ಮಾಡಿರುವುದು ಸಂಸದೀಯ ಪ್ರಜಾಪ್ರಭುತ್ವದ ಸಾರಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಟೀಕಿಸಿದ್ದರು.