ಕೊಚ್ಚಿ: ತೆಂಗಿನಕಾಯಿ ಕೊಯ್ಲಿಗೆ ಇತ್ತೀಚೆಗೆ ಕಾರ್ಮಿಕರೇ ಲಭಿಸುತ್ತಿಲ್ಲ ಎಂಬ ದುಗುಡ ಕೃಷಿಕರದ್ದು. ಇದಕ್ಕೆ ಪರಿಹಾರವಾಗಿ ತೆಂಗು ಅಭಿವೃದ್ಧಿ ಮಂಡಳಿ ಸ್ಥಾಪಿಸಿರುವ ಕಾಲ್ ಸೆಂಟರ್ ಮೂಲಕ ರಾಜ್ಯಾದ್ಯಂತ ಸುಮಾರು 700 ತೆಂಗು ಕೊಯ್ಲು ಕಾರ್ಮಿಕರು ಲಭ್ಯವಾಗಲಿದ್ದಾರೆ.
ಮಂಡಳಿಯ ಕೇಂದ್ರ ಕಛೇರಿಯಾದ ಕೊಚ್ಚಿಯಲ್ಲಿ ಕಾಲ್ ಸೆಂಟರ್ ಆರಂಭಿಸಲಾಗಿದ್ದು, ತೆಂಗು ಸುಲಿಯಲು, ಔಷಧಿ ಸಿಂಪರಣೆ, ಬೀಜದ ತೆಂಗಿನಕಾಯಿ ಹುಡುಕಲು, ಇತರ ಸಾಮಾನ್ಯ ಕೊಯ್ಲಿಗೆ ಇತ್ಯಾದಿಗಳಿಗೆ ಸಹಾಯ ಲಭ್ಯವಿರುತ್ತದೆ.
ಅವರು ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಕೆಲಸ ಮಾಡುತ್ತಾರೆ. ಹೊಸ ಪೀಳಿಗೆ ತೆಂಗು ಕೊಯ್ಲನ್ನು ವೃತ್ತಿಪರವಾಗಿ ಸ್ವೀಕರಿಸುತ್ತಿಲ್ಲ. ಅಪಾಯದ ಕೆಲಸವಾಗಿರುವುದರಿಂದ ನವ ತರುಣರು ತೆಂಗು ಮರವೇರುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಇದು ಬಿಕ್ಕಟ್ಟು ಸೃಷ್ಟಿಸುತ್ತಿದೆ. ತೆಂಗು ನಾಟಿ ಮಾಡಲು ಸಿಬ್ಬಂದಿ ಕೊರತೆ ಹಾಗೂ ರೋಗ, ಕೀಟ ಬಾಧೆಯಿಂದ ಹಾನಿಯಾಗಿ ಹಲವು ರೈತರು ಕೃಷಿ ಕೈಬಿಡುತ್ತಿದ್ದಾರೆ. ತೆಂಗು ಅಭಿವೃದ್ಧಿ ಮಂಡಳಿಯು ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಲಕ್ಷ್ಯ ಹೊಂದಿದ್ದು ಯೋಜನೆಯ ಮೂಲಕ ತೆಂಗು ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳು, ಕೃಷಿ ಇಲಾಖೆ ಅಧಿಕಾರಿಗಳು, ತೆಂಗು ರೈತರ ಸಂಘಗಳು, ತೆಂಗು ಕೊಯ್ಲು ನಡೆಸುವವರ ಜೊತೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಕೇರಳದಲ್ಲಿ 1,646 ತಂಡಗಳಲ್ಲಿ 32,926 ಮಂದಿ ತರಬೇತಿ ಪಡೆದಿದ್ದಾರೆ. ಭಾರತದಾದ್ಯಂತ 66,814 ಜನರಿಗೆ ತರಬೇತಿ ನೀಡಲಾಗಿದೆ. ತೆಂಗು ಉತ್ಪಾದಕರ ಸಂಘಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ತರಬೇತಿಗಳನ್ನು ನಡೆಸಲಾಯಿತು. ತರಬೇತಿ ಪಡೆದವರಿಗೆ ಉಚಿತವಾಗಿ ಯಂತ್ರಗಳನ್ನೂ ವಿತರಿಸಲಾಯಿತು. ಆದರೆ ಅವರಲ್ಲಿ ಹಲವರು ಕೆಲಸ ಮುಂದುವರಿಸಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಕಾಲ್ ಸೆಂಟರ್ ರಚನೆಯಾಗಿದೆ.