ಬದಿಯಡ್ಕ: ತುಳು ಲಿಪಿ ಸಂಶೋಧಕ, ಸಾಹಿತಿ ಡಾ.ಪುಂಡೂರು ವೆಂಕಟರಾಜ ಪುಣಿಚಿತ್ತಾಯರ ಜನ್ಮದಿನವಾದ ಮಂಗಳವಾರ ಬದಿಯಡ್ಕ ಸಮೀಪದ ಬಾರಡ್ಕದಲ್ಲಿರುವ ಡಾ.ಶ್ರೀನಿಧಿ ಸರಳಾಯರ ಸ್ವಗೃಹದಲ್ಲಿ ಏತಡ್ಕ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ನೇತೃತ್ವದಲ್ಲಿ ಸಂಸ್ಮರಣಾ ಸಮಾರಂಭ ನಡೆಯಿತು.
ಸಮಾರಂಭವನ್ನು ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಹರಿನಾರಾಯಣ ನಡುವಂತಿಲ್ಲಾಯ ಹಾಗೂ ಪು.ವೆಂ.ಪು. ಅವರ ಪುತ್ರ ವಿಜಯರಾಜ ಪುಣಿಚಿತ್ತಾಯ ಅವರು ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ.ಶ್ರೀನಿಧಿ ಸರಳಾಯ ಅವರು ಪುವೆಂಪು ಹಾಗೂ ತುಳು ಭಾಷೆ, ಸಂಶೋಧನೆಗಳ ಬಗ್ಗೆ ನೆನಪುಮಾಡಿದರು. ನ್ಯಾಯವಾದಿ ಪ್ರಕಾಶ ಅಮ್ಮಣ್ಣಾಯ ಅವರು ಮಾತನಾಡಿ ಪುವೆಂಪು ಅವರ ಜೀವನ ಮಾದರಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿ ಬದುಕುವುದೇ ನೈಜ ಸಂಸ್ಮರಣೆ ಎಂದು ತಿಳಿಸಿದರು.
ಮಂಜುನಾಥ ಉಡುಪ, ರಕ್ಷಾಧಿಕಾರಿ ಸೀತಾರಾಮ ಕುಂಜತ್ತಾಯ, ಪ್ರಭಾವತಿ ಕೆದಿಲಾಯ ಪುಂಡೂರು ಉಪಸ್ಥಿತರಿದ್ದು ಮಾತನಾಡಿದರು. ಮಹಿಳಾ ವಿಭಾಗದ ನಳಿನಿ ಕಲ್ಲಕಟ್ಟ, ಸೀತಾರತ್ನ ಪುಣಿಚಿತ್ತಾಯ, ಸತ್ಯವತಿ, ಸುರೇಖ ಅವರು ಪುವೆಂಪು ವಿರಚಿತ ತುಳು-ಕನ್ನಡ ಗೀತೆಗಳ ಗಾಯನ ನಡೆಯಿತು. ವಲಯ ಕಾರ್ಯದರ್ಶಿ ಮದುಸೂದನ ಎಂ. ಸ್ವಾಗತಿಸಿ, ನಿರೂಪಿಸಿದರು. ಪಾರ್ವತಿ ಕುಂಜತ್ತಾಯ ವಂದಿಸಿದರು. ಡಾ.ಸತೀಶ ಪುಣಿಚಿತ್ತಾಯ ಪೆರ್ಲ ಪ್ರಾರ್ಥನೆ ಹಾಡಿದರು.