ಚಿತ್ತೋರ್‌ಗಢ: ಲೋಕೋಪೈಲಟ್ ಸಮಯಪ್ರಜ್ಞೆಯಿಂದ ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರು ದೊಡ್ಡ ದುರಂತವೊಂದರಿಂದ ಪಾರಾಗಿದ್ದಾರೆ.
ರಾಜಸ್ಥಾನದ ಚಿತ್ತೋರ್‌ಗಢದ ಬಳಿ ರೈಲು ಹಳಿಯ ಮೇಲೆ ಇಟ್ಟಿಗೆಯಷ್ಟು ದೊಡ್ಡದಾದ ಕಲ್ಲುಗಳನ್ನು, ಕಬ್ಬಿಣದ ರಾಡ್‌ಗಳನ್ನು ಇಟ್ಟು ರೈಲನ್ನು ಹಳಿ ತಪ್ಪಿಸುವ ಕಿಡಿಗೇಡಿಗಳ ಷಡ್ಯಂತ್ರವನ್ನು ರೈಲ್ವೆ ಸಿಬ್ಬಂದಿ ವಿಫಲಗೊಳಿಸಿದ್ದಾರೆ.
ಹಳಿ ಮೇಲಿನ ಕಲ್ಲುಗಳನ್ನು ರೈಲ್ವೇ ಸಿಬ್ಬಂದಿ ತೆಗೆದು ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ಕಬ್ಬಿಣದ ರಾಡ್‌ಗಳನ್ನು ಹಳಿಗಳ ಕೀಲುಗಳ ಮಧ್ಯೆ ಸಿಕ್ಕಿಸಿರುವುದು ಕಂಡುಬಂದಿದೆ.
'ಒಂದು ಅಡಿ ಉದ್ದದ ಕಬ್ಬಿಣದ ರಾಡುಗಳು, ದೊಡ್ಡ ಕಲ್ಲುಗಳನ್ನು ರೈಲು ಹಳಿಯ ಮೇಲೆ ಇರಿಸಲಾಗಿದೆ. ಲೋಕೊಪೈಲಟ್ ಇದನ್ನು ಗಮನಿಸಿದ್ದು, ತಕ್ಷಣ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ಅಲ್ಲದೇ ಕಂಟ್ರೋಲ್ ರೂಮ್‌ಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ಅನ್ವಯ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸ್ ತಂಡವನ್ನು (ಜಿಆರ್‌ಪಿ) ಸ್ಥಳಕ್ಕೆ ಕಳುಹಿಸಲಾಗಿದೆ' ಎಂದು ರೈಲ್ವೆ ಇಲಾಖೆ ಪಿಆರ್‌ಓ ಶಾಹಿ ಕಿರಣ್ ತಿಳಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
ಸೆಪ್ಟೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿ ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ರಾಜಸ್ತಾನ ಚುನಾವಣಾ ಪ್ರಚಾರದ ಭಾಗವಾಗಿ ಭಾನುವಾರ ಚಿತ್ತೋರ್‌ಗಢದಲ್ಲಿ ರ್ಯಾಲಿಯನ್ನು ನಡೆಸಿದ್ದರು.