ತೆಹ್ರಾನ್: ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟದ (ಒಐಸಿ) ಸದಸ್ಯ ರಾಷ್ಟ್ರಗಳು ಇಸ್ರೇಲ್‌ನ ಮೇಲೆ ತೈಲ ಪೂರೈಕೆ ಸೇರಿದಂತೆ ಇತರ ರೀತಿಯ ನಿರ್ಬಂಧಗಳನ್ನು ವಿಧಿಸಬೇಕು. ಜತೆಗೆ, ಇಸ್ಲಾಮಿಕ್ ರಾಷ್ಟ್ರಗಳಲ್ಲಿರುವ ಇಸ್ರೇಲ್‌ನ ಎಲ್ಲ ರಾಯಭಾರಿಗಳನ್ನು ಹೊರಹಾಕುವಂತೆ ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮಿರ್-ಅಬ್ದುಲ್ಲಾಹಿಯಾನ್ ಕರೆ ನೀಡಿದ್ದಾರೆ.
ಮಂಗಳವಾರ ತಡರಾತ್ರಿ ಗಾಜಾ ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೇ ಉಲ್ಬಣಗೊಳ್ಳುತ್ತಿರುವ ಇಸ್ರೇಲ್ -ಪ್ಯಾಲೆಸ್ಟೀನ್ ಸಂಘರ್ಷದ ಕುರಿತು ಚರ್ಚಿಸಲು ಸೌದಿ ನಗರದ ಜೆಡ್ಡಾದಲ್ಲಿ ಒಐಸಿ ನೇತೃತ್ವದಲ್ಲಿ ತುರ್ತು ಸಭೆ ನಡೆಯುತ್ತಿದೆ.
ಇಸ್ರೇಲ್‌ನ ರಾಯಭಾರಿಗಳನ್ನು ಹೊರಹಾಕುವುದರ ಜೊತೆಗೆ ತೈಲ ನಿರ್ಬಂಧಗಳು ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳಿಂದ ಇಸ್ರೇಲ್ ಮೇಲೆ ತಕ್ಷಣದ ಮತ್ತು ಸಂಪೂರ್ಣ ನಿರ್ಬಂಧವನ್ನು ಹೇರುವಂತೆ ವಿದೇಶಾಂಗ ಸಚಿವ ಹುಸೇನ್ ಅಮಿರ್-ಅಬ್ದುಲ್ಲಾಹಿಯಾನ್ ಕರೆ ನೀಡಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಗಾಜಾ ನಗರದಲ್ಲಿರುವ ಆಸ್ಪತ್ರೆಯೊಂದರ ಮೇಲೆ ಮಂಗಳವಾರ ತಡರಾತ್ರಿ ನಡೆದ ದಾಳಿಯಲ್ಲಿ ಕನಿಷ್ಠ 500 ಮಂದಿ ಸಾವಿಗೀಡಾಗಿದ್ದಾರೆ.
ಅಕ್ಟೋಬರ್ 7ರಂದು ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಸಂಘರ್ಷವು ಆರಂಭವಾದ ನಂತರ ಈವರೆಗೆ ಗಾಜಾಪಟ್ಟಿಯಲ್ಲಿ ಸುಮಾರು 3,000 ಜನರು ಹಾಗೂ ಇಸ್ರೇಲ್‌ನಲ್ಲಿ ಸುಮಾರು 1,400 ಜನರು ಮೃತಪಟ್ಟಿದ್ದಾರೆ.