ನವದೆಹಲಿ: ಚೀನಾ ಪರ ಪ್ರಚಾರಕ್ಕಾಗಿ ದೇಣಿಗೆ ಪಡೆದ ಆರೋಪದ ಮೇಲೆ ನ್ಯೂಸ್‌ಕ್ಲಿಕ್ ಪೋರ್ಟಲ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿರುವ ದೆಹಲಿ ಪೊಲೀಸರು, ಎಫ್‌ಐಆರ್‌ನಲ್ಲಿ ಸಾಂವಿಧಾನಿಕ ವಕೀಲ ಗೌತಮ್ ಭಾಟಿಯಾ ಅವರ ಹೆಸರು ಸೇರಿಸಿದ್ದಾರೆ ಮತ್ತು "ಪ್ರಮುಖ ವ್ಯಕ್ತಿ" ಎಂದು ಉಲ್ಲೇಖಿಸಿದ್ದಾರೆ.
ವಕೀಲ ಗೌತಮ್ ಭಾಟಿಯಾ ಅವರು ಚೀನಾದ ಟೆಲಿಕಾಂ ಮೇಜರ್‌ಗಳಾದ ಶಿಯೋಮಿ ಮತ್ತು ವಿವೋಗೆ ಸಂಬಂಧಿಸಿದ ಕಾನೂನು ಪ್ರಕರಣಗಳಲ್ಲಿ ಅವರ ಪರವಾಗಿ ವಾದಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.
ಪೋಲೀಸರ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ಪ್ರಕಾರ, ಬಂಧಿತ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು, ಚೀನೀ ಟೆಲಿಕಾಂ ಕಂಪನಿಗಳ ವಿರುದ್ಧದ ಪ್ರಕರಣಗಳಲ್ಲಿ ಕಾನೂನು ರಕ್ಷಣೆ ನೀಡಲು "ನೆವಿಲ್ಲೆ ರಾಯ್ ಸಿಂಘಂ, ಗೀತಾ ಹರಿಹರನ್, ಗೌತಮ್ ಭಾಟಿಯಾ(ಪ್ರಮುಖ ವ್ಯಕ್ತಿ) ಜೊತೆಗೆ ಭಾರತದಲ್ಲಿ 'ಲೀಗಲ್ ಕಮ್ಯುನಿಟಿ ನೆಟ್‌ವರ್ಕ್' ಅನ್ನು ರಚಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಎಫ್‌ಐಆರ್‌ನಲ್ಲಿ ಎಲ್ಲಿಯೂ ಕಾನೂನು ಪಂಡಿತರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಎಫ್ಐಆರ್ ನಲ್ಲಿ ಭಾಟಿಯಾ ಅವರ ಹೆಸರಿಗೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರು, "ಕಕ್ಷಿದಾರರಿಗೆ ಕಾನೂನು ರಕ್ಷಣೆ ನೀಡುವ ವಕೀಲರನ್ನು ಎಫ್‌ಐಆರ್‌ನಲ್ಲಿ ಹೆಸರಿಸಬಹುದು ಎನ್ನುವುದು ಅಚ್ಚರಿ ಮೂಡಿಸಿದೆ. ತಮ್ಮ ಕಕ್ಷಿದಾರರಿಗೆ ಕಾನೂನು ರಕ್ಷಣೆ ಒದಗಿಸುವುದು ವಕೀಲರ ಕರ್ತವ್ಯ. ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್ ವಿರುದ್ಧ ಸ್ಪಷ್ಟವಾಗಿ ನಿಷ್ಪ್ರಯೋಜಕ ಎಫ್‌ಐಆರ್ ದಾಖಲಿಸಿದ್ದಾರೆ. ಇದು ಸಂಪೂರ್ಣವಾಗಿ ಮೋದಿ ಮತ್ತು ಶಾ ಅವರ ಪ್ರತೀಕಾರದ ಕ್ರಮ. ಪತ್ರಕರ್ತರು ಖುಲಾಸೆಗೊಳ್ಳುವ ಮೊದಲು ಸಾಧ್ಯವಾದಷ್ಟು ದಿನ ಜೈಲಿನಲ್ಲಿ ಇರಿಸುವುದು ಅವರ ಉದ್ದೇಶ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವರದಿಗಳ ಪ್ರಕಾರ, ಸಿಂಘಮ್ ಶಾಂಘೈ ನಿವಾಸಿಯಾಗಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಚಾರ ವಿಭಾಗದ ಸಕ್ರಿಯ ಸದಸ್ಯ ಮತ್ತು ಲೇಖಕಿ ಗೀತಾ ಹರಿಹರನ್ ಅವರು ನ್ಯೂಸ್‌ಕ್ಲಿಕ್ ಮಾಧ್ಯಮದ ಷೇರುದಾರರು ಎಂದು ಪೊಲೀಸರ ಹೇಳಿದ್ದಾರೆ.