ಖಾನ್ ಯೂನಿಸ್: ಇಸ್ರೇಲ್‌ನ ಉತ್ತರ ಭಾಗದ ಲೆಬನಾನ್ ಗಡಿಯಲ್ಲಿ ಹಿಂಸಾಚಾರ ನಡೆದಿರುವುದು ಯುದ್ಧವು ಇತರೆಡೆಗಳಿಗೂ ವ್ಯಾಪಿಸುವ ಭೀತಿಯನ್ನು ಹೆಚ್ಚಿಸಿದೆ. ಸ್ಫೋಟಕಗಳನ್ನು ಹೊಂದಿದ್ದ ಉಡುಪು ಧರಿಸಿ ಲೆಬನಾನ್ ಕಡೆಯಿಂದ ಇಸ್ರೇಲ್ ಪ್ರವೇಶಿಸಲು ಹವಣಿಸುತ್ತಿದ್ದ ನಾಲ್ವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ರಫಾದಲ್ಲಿ 27 ಮಂದಿ ಹಾಗೂ ಖಾನ್ ಯೂನಿಸ್‌ನಲ್ಲಿ 30 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಬಂಡುಕೋರ ಸಂಘಟನೆಯ ಬಾಸೆಂ ನಯೀಮ್ ತಿಳಿಸಿದ್ದಾರೆ. ಖಾನ್ ಯೂನಿಸ್‌ನಲ್ಲಿನ ನಾಸೆರ್ ಆಸ್ಪತ್ರೆಗೆ ಮಂಗಳವಾರ 50 ಮೃತದೇಹಗಳನ್ನು ತರಲಾಗಿದೆ.
ಗಾಜಾ ಪಟ್ಟಿಯ ಕೇಂದ್ರಭಾಗದಲ್ಲಿ ಇರುವ ದೆಯರ್ ಅಲ್ ಬಲಾ ಮೇಲೆ ನಡೆದ ವಾಯುದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ. ಆದರೆ ದಾಳಿಗೂ ಮೊದಲು ಯಾವುದೇ ಎಚ್ಚರಿಕೆ ನೀಡಿರಲಿಲ್ಲ ಎಂದು ಅಲ್ಲಿನವರು ಹೇಳಿದ್ದಾರೆ. ಗಾಜಾದಲ್ಲಿ ಧ್ವಂಸಗೊಂಡಿರುವ ಕಟ್ಟಡಗಳ ಅಡಿಯಲ್ಲಿ 1,200 ಜನ ಸಿಲುಕಿದ್ದಾರೆ ಎಂದು ನಂಬಲಾಗಿದೆ. ಇಂಟರ್ನೆಟ್, ಮೊಬೈಲ್ ಸಂಪರ್ಕ ಇಲ್ಲದೆ, ಅಗತ್ಯ ಪ್ರಮಾಣದಲ್ಲಿ ಇಂಧನ ಇಲ್ಲದೆ, ವೈಮಾನಿಕ ದಾಳಿಗೆ ಗುರಿಯಾಗುವ ಅಪಾಯ ಎದುರಿಸುತ್ತಲೇ ನೆರವು ತಂಡಗಳು ಜನರನ್ನು ರಕ್ಷಿಸಲು ಹೆಣಗುತ್ತಿವೆ.
ಸೋಮವಾರ ನಡೆದ ವಾಯುದಾಳಿಯಲ್ಲಿ ಗಾಜಾ ನಗರದಲ್ಲಿ ಏಳು ಮಂದಿ ಅರೆವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಗಳಿಗೆ ವಿದ್ಯುತ್ ಸಂಪರ್ಕವು ಸ್ಥಗಿತಗೊಳ್ಳುವ ಅಪಾಯ ಹೆಚ್ಚಾಗುತ್ತಿದೆ ಎಂದು ನೆರವು ಒದಗಿಸುತ್ತಿರುವ ಕಾರ್ಯಕರ್ತರು ಮತ್ತೆ ಮತ್ತೆ ಎಚ್ಚರಿಸಿದ್ದಾರೆ.
ಗಾಜಾದಲ್ಲಿನ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಸೂತ್ರವೊಂದನ್ನು ರೂಪಿಸಲು ಇಸ್ರೇಲ್ ಮತ್ತು ಅಮೆರಿಕ ಒಮ್ಮತಕ್ಕೆ ಬಂದಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಟೆಲ್ ಅವೀವ್‌ನಲ್ಲಿ ತಿಳಿಸಿದ್ದಾರೆ. ನಾಗರಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅವರನ್ನು ಪ್ರತ್ಯೇಕವಾಗಿಸುವ ಆಲೋಚನೆಯೂ ಇದರಲ್ಲಿ ಸೇರಿದೆ.
ಇಸ್ರೇಲ್‌ಗೆ ಬೈಡನ್ ಭೇಟಿ
ಗಾಜಾ ಪಟ್ಟಿಯಲ್ಲಿ ಇರುವ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ವಿಚಾರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಕೊನೆಗೊಳಿಸಲು ಅಮೆರಿಕ ಪ್ರಯತ್ನ ನಡೆಸಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗೆ ಬುಧವಾರ ಭೇಟಿ ನೀಡಲಿದ್ದಾರೆ. ಅವರು ಅರಬ್ ನಾಯಕರನ್ನೂ ಭೇಟಿ ಮಾಡಲಿದ್ದಾರೆ.
'ಹಮಾಸ್ ನಡೆಸಿದ ಬರ್ಬರ ಭಯೋತ್ಪಾದಕ ದಾಳಿಗೆ ಗುರಿಯಾಗಿರುವ ಇಸ್ರೇಲ್‌ಗೆ ಬೆಂಬಲ ಸೂಚಿಸಲು ನಾನು ಬುಧವಾರ ಇಸ್ರೇಲ್‌ಗೆ ತೆರಳಲಿದ್ದೇನೆ. ನಂತರ ನಾನು ಜೋರ್ಡನ್‌ಗೆ ತೆರಳಿ, ನಾಯಕರನ್ನು ಭೇಟಿ ಮಾಡಲಿದ್ದೇನೆ, ಮಾನವೀಯ ನೆಲೆಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮಾತುಕತೆ ನಡೆಸಲಿದ್ದೇನೆ, ಹಮಾಸ್ ಸಂಘಟನೆಯು ಪ್ಯಾಲೆಸ್ಟೀನ್ ಜನರನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿದ್ದೇನೆ' ಎಂದು ಜೋ ಬೈಡನ್ ಅವರು ಎಕ್ಸ್ ವೇದಿಕೆಯ ಮೂಲಕ ತಿಳಿಸಿದ್ದಾರೆ. ಬೈಡನ್ ಅವರು ಜೋರ್ಡನ್, ಈಜಿಪ್ಟ್ ಮತ್ತು ಪ್ಯಾಲೆಸ್ಟೀನ್‌ನ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ.