ಮಂಜೇಶ್ವರ: ಕೇರಳ ಪ್ರಾಂತ್ಯ ಪೆನ್ಶನರ್ಸ್ ಸಂಘದ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಸಬ್ ಟ್ರಶರಿಯ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿ ಸೋಮವಾರ ಧರಣಿ ನಡೆಸಲಾಯಿತು.
ಧರಣಿಯನ್ನು ಪ್ರಾಂತ ಉಪಾಧ್ಯಕ್ಷ ಈಶ್ವರ ರಾವ್ ಉದ್ಘಾಟಿಸಿದರು. ಪಿಂಚಣಿದಾರರಿಗೆ ಕಳೆದ 2019ರಿಂದ ಸಿಗಬೇಕಾಗಿದ್ದ ಬಾಕಿಯಾಗಿರುವ ಎರಡು ಕಂತು ಪಿಂಚಣಿ ಮತ್ತು ಮೂರು ವರ್ಷಗಳಿಂದ ಕಾಲ ಕಾಲಕ್ಕೆ ಕೊಡಬೇಕಾಗಿದ್ದ ಒಟ್ಟು ಆರು ಕಂತು ತುಟ್ಟಿಭತ್ಯೆ ಮುಂತಾದ ಅನುಕೂಲತೆಗಳನ್ನು ಕೂಡಲೇ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಮುತ್ತುಕೃಷ್ಣನ್ ಅವರು ಮೆಡಿಸೆಪ್‍ನ ನ್ಯೂನತೆಗಳಿಂದ ಪಿಂಚಣಿದಾರು ಅನುಭವಿಸುವ ಸಂಕಷ್ಟಗಳನ್ನು ಸರಿಪಡಿಸಬೇಕೆಂದು ತಿಳಿಸಿದರು. ಪಿಂಚಣಿ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ ಬಾಳಿಕೆ ಅವರು ಕಳೆದ ನಾಲ್ಕು ವರ್ಷಗಳಿಂದ ಇಂದಿನವರೇಗೆ 80000ದಷ್ಟು ಪಿಂಚಣಿದಾರರು ಸರ್ಕಾರದ ಧೋರಣೆಯಿಂದ ಪಿಂಚಣಿ ಸವಲತ್ತುಗಳನ್ನು ಪಡೆಯದೆ ಮರಣಪಟ್ಟಿರುವರೆಂದೂ, ಮೆಡಿಸೆಪ್ ಎಂಬುದು ಪಿಂಚಣಿದಾರರನ್ನು ವಂಚಿಸುವ ಆರೋಗ್ಯ ಇನ್ಸುರೆನ್ಸ್ ಆಗಿರುವುದರಿಂದ ಇದನ್ನು ಸರ್ಕಾರ ನಿಲ್ಲಿಸಬೇಕೆಂದು ಹೇಳಿದರು.
ಕೇಶವ ಭಟ್, ನಾರಾಯಣ ಭಟ್ ತಲೆಂಗಳ ಮುಂತಾದ ಗಣ್ಯರು ಧರಣಿಯನ್ನು ಉದ್ದೇಶಿಸಿ ಮಾತಾಡಿದರು. ನಾಗರಾಜ ಬಾಳಿಕೆ ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ಶ್ರೀಧರ ರಾವ್ ವಂದಿಸಿದರು.