ನವದೆಹಲಿ (PTI): ಭಾರತದ ಆಂತರಿಕ ವಿಷಯಗಳ ಕುರಿತು ಯುರೋಪಿನ ಸಂಸತ್‌ನಲ್ಲಿ ನಿರ್ಣಯ ಕೈಗೊಂಡಿದ್ದನ್ನು ಖಂಡಿಸಿ ಯುರೋಪಿನ ಸಂಸತ್ ಡೆಪ್ಯುಟಿ ಸ್ಪೀಕರ್ ನಿಕೋಲಾ ಬೀರ್ ಅವರ ಎದುರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶನಿವಾರ ತೀವ್ರ ಪ್ರತಿಭಟನೆ ದಾಖಲಿಸಿದರು.
ನವದೆಹಲಿ (PTI): ಭಾರತದ ಆಂತರಿಕ ವಿಷಯಗಳ ಕುರಿತು ಯುರೋಪಿನ ಸಂಸತ್‌ನಲ್ಲಿ ನಿರ್ಣಯ ಕೈಗೊಂಡಿದ್ದನ್ನು ಖಂಡಿಸಿ ಯುರೋಪಿನ ಸಂಸತ್ ಡೆಪ್ಯುಟಿ ಸ್ಪೀಕರ್ ನಿಕೋಲಾ ಬೀರ್ ಅವರ ಎದುರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶನಿವಾರ ತೀವ್ರ ಪ್ರತಿಭಟನೆ ದಾಖಲಿಸಿದರು.
'ನಿಕೋಲಾ ಬೀರ್ ಅವರನ್ನು ಭೇಟಿಯಾದಾಗ ಬಿರ್ಲಾ ಅವರು ಭಾರತದ ಸಾರ್ವಭೌಮತ್ವದ ಬಗ್ಗೆ ಒತ್ತಿಹೇಳಿದರು. ಭಾರತದ ಆಂತರಿಕ ವಿಷಯಗಳ ಬಗ್ಗೆ ಯುರೋಪ್ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದರ ವಿರುದ್ಧ ತೀವ್ರ ಪ್ರತಿಭಟನೆ ದಾಖಲಿಸಿದರು' ಎಂದು ಲೋಕಸಭೆ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
'ಪ್ರತಿ ರಾಷ್ಟ್ರವು ಮತ್ತು ಸಂಸತ್ತು ಸಾರ್ವಭೌಮ. ಬೇರೆ ದೇಶಗಳ ಆಂತರಿಕ ವಿಷಯಗಳನ್ನು ಬೇರೆಯವರು ಚರ್ಚಿಸುವಂತಿಲ್ಲ' ಎಂದು ಬಿರ್ಲಾ ಅವರು ನಿಕೋಲಾ ಬೀರ್ ಅವರಿಗೆ ತಿಳಿಸಿದರು.
ಇದೇ ವೇಳೆ ಬಿರ್ಲಾ ಅವರು, ಮುಂದಿನ ವರ್ಷ ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಮಯದಲ್ಲಿನ ಪ್ರಜಾಪ್ರಭುತ್ವದ ವೈಭವ ವೀಕ್ಷಿಸಲು ನಿಕೋಲಾ ಅವರಿಗೆ ಆಹ್ವಾನ ನೀಡಿದರು.
ಪಿ20 ಶೃಂಗಸಭೆಯ ಯಶಸ್ಸಿಗೆ ಮತ್ತು ಭಾರತ ಹಾಗೂ ಯುರೋಪ್ ಸಂಸತ್ತು ನಿಕಟ ಸಂಬಂಧ ಕಾಯ್ದುಕೊಂಡಿರುವುದಕ್ಕೆ ನಿಕೋಲಾ ಅವರು, ಬಿರ್ಲಾ ಅವರನ್ನು ಅಭಿನಂದಿಸಿದರು. 'ಸದ್ಯ ಯುರೋಪ್ ಸವಾಲಿನ ಸಮಯ ಎದುರಿಸುತ್ತಿದೆ. ಭಾರತದ ಸಹಕಾರ ಯುರೋಪ್‌ಗೆ ಬೇಕಿದೆ' ಎಂದೂ ನಿಕೋಲಾ ಒತ್ತಿ ಹೇಳಿದರು.
ಜುಲೈನಲ್ಲಿ, ಯುರೋಪಿನ ಸಂಸತ್‌ನಲ್ಲಿ ಮಣಿಪುರ ಜನಾಂಗೀಯ ಹಿಂಸಾಚಾರ ಹತ್ತಿಕ್ಕಲು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ಭಾರತ ಸರ್ಕಾರವು ಶೀಘ್ರ ಕ್ರಮಕೈಗೊಳ್ಳಬೇಕೆಂಬ ಒತ್ತಡ ಹೇರುವ ನಿರ್ಣಯ ಅಂಗೀಕರಿಸಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಭಾರತ, 'ಜುಲೈ ನಿರ್ಣಯ ಸ್ವೀಕಾರಾರ್ಹವಲ್ಲ ಮತ್ತು ಇದು ವಸಾಹತುಶಾಹಿ ಮನಸ್ಥಿತಿಯ ಪ್ರತೀಕ' ಎಂದು ಟೀಕಿಸಿತ್ತು.