ನವದೆಹಲಿ (PTI): 'ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ಕೆನಡಾ ರಾಜತಾಂತ್ರಿಕ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ' ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಮರ್ಥಿಸಿಕೊಂಡರು.
ನವದೆಹಲಿ (PTI): 'ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ಕೆನಡಾ ರಾಜತಾಂತ್ರಿಕ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ' ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಮರ್ಥಿಸಿಕೊಂಡರು.
ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕರ ಸುರಕ್ಷತೆಗೆ ಸಂಬಂಧಿಸಿದ ಗಮನಾರ್ಹ ಪ್ರಗತಿಯು ಕಂಡುಬಂದಲ್ಲಿ ಕೆನಡಾದ ಪ್ರಜೆಗಳಿಗೆ ವೀಸಾ ಕೊಡುವ ಪ್ರಕ್ರಿಯೆಯನ್ನು ಪುನರಾರಂಭಿಸಲು ಚಿಂತನೆ ನಡೆಯಲಿದೆ ಎಂದು ತಿಳಿಸಿದರು.
ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅಕ್ಟೋಬರ್‌ನಲ್ಲಿ ಆರೋಪಿಸಿದ್ದರು. ಆ ಹೇಳಿಕೆಯ ನಂತರ ಉಭಯ ದೇಶಗಳ ಬಾಂಧವ್ಯ ಹದಗೆಟ್ಟಿತ್ತು.
ಟ್ರೂಡೊ ಆರೋಪದ ಬಳಿಕ ಕೆನಡಾ ಪ್ರಜೆಗಳಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪ್ರಕಟಿಸಿದ್ದರು.
ಭಾರತದಲ್ಲಿದ್ದ ಕೆನಡಾದ ರಾಜತಾಂತ್ರಿಕರ ಸಂಖ್ಯೆ ಕುಗ್ಗಿಸುವ ಕ್ರಮ ಕುರಿತಂತೆ, ವಿಯೆನ್ನಾ ಒಪ್ಪಂದದಲ್ಲಿಯೂ ಇದಕ್ಕೆ ಅವಕಾಶವಿದೆ. ನಮ್ಮ ಪ್ರಕರಣದಲ್ಲಿ ಕೆನಡಾದ ಸಿಬ್ಬಂದಿ ನಿರಂತರ ಹಸ್ತಕ್ಷೇಪ ಮಾಡುತ್ತಿದ್ದರು ಎಂಬ ಕಾರಣಕ್ಕೆ ಈ ಕ್ರಮಕೈಗೊಂಡಿದೆ ಎಂದು ತಿಳಿಸಿದರು.
ಕೆನಡಾವು ಈಗಾಗಲೇ ಭಾರತದಿಂದ 41 ಜನ ರಾಜತಾಂತ್ರಿಕರನ್ನು ಹಿಂದೆ ಕರೆಸಿಕೊಂಡಿದೆ. ಗುರುವಾರ ಈ ವಿಷಯ ಪ್ರಕಟಿಸಿದ್ದ ಕೆನಡಾದ ವಿದೇಶಾಂಗ ಸಚಿವ ಮೆಲಾನಿ ಜೊಲಿ ಅವರು, 'ಭಾರತದ ಕ್ರಮವು ಅಂತರರಾಷ್ಟ್ರೀಯ ನಿಯಮಕ್ಕೆ ವಿರುದ್ಧವಾದುದಾಗಿದೆ' ಎಂದು ಹೇಳಿದ್ದರು.