ಇಂಫಾಲ್ (PTI): ಹಿಂಸಾಚಾರ ಮತ್ತು ಆಸ್ತಿಪಾಸ್ತಿ ಹಾನಿಯಾಗಿರುವ ದೃಶ್ಯಗಳಿರುವ ವಿಡಿಯೊ ಹಾಗೂ ಚಿತ್ರ ಹಂಚಿಕೊಳ್ಳುವುದನ್ನು ಮಣಿಪುರ ಸರ್ಕಾರ ನಿರ್ಬಂಧಿಸಿದೆ.
ಇಂಫಾಲ್ (PTI): ಹಿಂಸಾಚಾರ ಮತ್ತು ಆಸ್ತಿಪಾಸ್ತಿ ಹಾನಿಯಾಗಿರುವ ದೃಶ್ಯಗಳಿರುವ ವಿಡಿಯೊ ಹಾಗೂ ಚಿತ್ರ ಹಂಚಿಕೊಳ್ಳುವುದನ್ನು ಮಣಿಪುರ ಸರ್ಕಾರ ನಿರ್ಬಂಧಿಸಿದೆ.
ಈ ಕುರಿತು ಬುಧವಾರ ರಾತ್ರಿ ಆದೇಶ ಹೊರಡಿಸಿರುವ ಗೃಹ ಇಲಾಖೆ, ಇಂತಹ ವಿಡಿಯೊ ಮತ್ತು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ದುಷ್ಕರ್ಮಿಗಳು ಇಬ್ಬರು ಯುವಕರನ್ನು ಸಮೀಪದಿಂದ ಗುಂಡು ಹಾರಿಸಿ ಕೊಂದು, ಹೊಂಡದಲ್ಲಿ ಹೂಳುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಸರ್ಕಾರ ಈ ಆದೇಶ ಹೊರಡಿಸಿದೆ. ವಿಡಿಯೊದಲ್ಲಿ ದಾಖಲಾಗಿರುವ ಕೃತ್ಯ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ.
ಹಿಂಸಾಚಾರ ದೃಶ್ಯಗಳಿರುವ ವಿಡಿಯೊ ಮತ್ತು ಫೊಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದರಿಂದ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ. ಈ ಕಾರಣಕ್ಕೆ ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾರ ಬಳಿಯಾದರೂ ಇಂತಹ ವಿಡಿಯೊಗಳಿದ್ದರೆ ಅವರು ಅದನ್ನು ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತರಬೇಕು. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ತಂತ್ರಜ್ಞಾನವನ್ನು ದುರುಪಯೋಗಪಡಿಸಿರುವ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ.