ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ಶುಕ್ರವಾರ (ಅಕ್ಟೋಬರ್ 13) ಬೆಳಿಗ್ಗೆ ಸಾಧಾರಣ ಮಟ್ಟದಲ್ಲಿ ಇದೆ ಎಂದು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ಸಂಸ್ಥೆ (SAFAR) ತಿಳಿಸಿದೆ.
ಲೋಧಿ ರಸ್ತೆಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (AQI) 72ರಷ್ಟಿದ್ದು, ತೃಪ್ತಿಕರವಾಗಿದೆ.
ದೆಹಲಿಯ ಆನಂದ್ ವಿಹಾರ್‌ನಲ್ಲಿನ ಗಾಳಿಯ ಗುಣಮಟ್ಟ 257 ಎಕ್ಯೂಐಯೊಂದಿಗೆ ಕಳಪೆ ಎಂದು ದಾಖಲಾಗಿದೆ. ಆದರೆ ಬವಾನಾ ಪ್ರದೇಶದಲ್ಲಿ ಇದು 347ರಷ್ಟು ದಾಖಲಾಗಿದ್ದು, ಅದು ತೀವ್ರ ಕಳಪೆಯಾಗಿದೆ. ಆರ್.ಕೆ ಪುರಂ ಪ್ರದೇಶದಲ್ಲಿ ಎಕ್ಯೂಐ 214, ದ್ವಾರಕಾ ಸೆಕ್ಟರ್ 8ರಲ್ಲಿ 219 ದಾಖಲಾಗಿದ್ದರೆ, ನರೇಲಾದಲ್ಲಿ 285 ದಾಖಲಾಗಿದೆ.
ಅಕ್ಟೋಬರ್ 6ರಂದು ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕಳಪೆ ಮಟ್ಟಕ್ಕೆ ಇಳಿದಿತ್ತು. ಹೀಗಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ (NCR)ದ ಅಧಿಕಾರಿಗಳಿಗೆ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ 1ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಸೂಚಿಸಲಾಗಿತ್ತು.
ಅದರಂತೆ ರಸ್ತೆ ಬದಿಯ ತಿನಿಸುಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಚಳಿಗಾಲದ ಅವಧಿಯಲ್ಲಿ ವಾಯು ಮಾಲಿನ್ಯ ತಡೆಯಲು ದೆಹಲಿ-ಎನ್‌ಸಿಆರ್‌ನಲ್ಲಿ ಜಾರಿಗೊಳಿಸಲಾದ 'ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್' (GRAP) ಎಂದು ಕರೆಯಲ್ಪಡುವ ಸರ್ಕಾರದ ಮಾಲಿನ್ಯ ನಿಯಂತ್ರಣ ಯೋಜನೆಯ ಭಾಗವಾಗಿ ಈ ಕ್ರಮ ಬಂದಿದೆ.
ಅಕ್ಟೋಬರ್ 9 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಮುಖ್ಯ ವಕ್ತಾರ ಪ್ರಿಯಾಂಕಾ ಕಕ್ಕರ್, "2022 ರಲ್ಲಿ, ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಶೇ.8ರಷ್ಟು ಸುಧಾರಿಸಿದೆ. 2023ರಲ್ಲಿ, ಈ ಸುಧಾರಣೆಯು ಶೇಕಡಾ 31ಕ್ಕೆ ತಲುಪಿದೆ" ಎಂದು ಹೇಳಿದ್ದಾರೆ.