ಬೀಜಿಂಗ್: 'ಪಾಶ್ಚಾತ್ಯ ರಾಷ್ಟ್ರಗಳು ಬೆಲ್ಟ್ ಆಯಂಡ್ ರೋಡ್ ಉಪಕ್ರಮವನ್ನು (ಬಿಆರ್‌ಐ) ದುರ್ಬಲಗೊಳಿಸಲು ಯತ್ನಿಸುತ್ತಿವೆ. ಆ ಮೂಲಕ ಚೀನಾ ಆರ್ಥಿಕತೆ ಮೇಲೆ ಪಾಲುದಾರ ರಾಷ್ಟ್ರಗಳು ಹೊಂದಿರುವ ಅವಲಂಬನೆ ತಗ್ಗಿಸಲು ಹುನ್ನಾರ ನಡೆಸಿವೆ' ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ಟೀಕಿಸಿದ್ದಾರೆ.
ಬೀಜಿಂಗ್: 'ಪಾಶ್ಚಾತ್ಯ ರಾಷ್ಟ್ರಗಳು ಬೆಲ್ಟ್ ಆಯಂಡ್ ರೋಡ್ ಉಪಕ್ರಮವನ್ನು (ಬಿಆರ್‌ಐ) ದುರ್ಬಲಗೊಳಿಸಲು ಯತ್ನಿಸುತ್ತಿವೆ. ಆ ಮೂಲಕ ಚೀನಾ ಆರ್ಥಿಕತೆ ಮೇಲೆ ಪಾಲುದಾರ ರಾಷ್ಟ್ರಗಳು ಹೊಂದಿರುವ ಅವಲಂಬನೆ ತಗ್ಗಿಸಲು ಹುನ್ನಾರ ನಡೆಸಿವೆ' ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ಟೀಕಿಸಿದ್ದಾರೆ.
ಬುಧವಾರ ಇಲ್ಲಿ ಆರಂಭವಾದ ಬಿಆರ್‌ಐ ಸಭೆಯಲ್ಲಿ ಮಾತನಾಡಿದ ಅವರು, 'ದಶಕದ ಹಿಂದೆ ರೂಪಿಸಿದ ಯೋಜನೆ ಇದಾಗಿದೆ. ಏಷ್ಯಾ, ಆಫ್ರಿಕಾ ಹಾಗೂ ಯುರೋಪ್ ನಡುವೆ ನೆಲ, ಜಲ ಮಾರ್ಗವಾಗಿ ಜಾಗತಿಕ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಇಂಧನ ಸಂಪರ್ಕ ಬೆಸೆಯುವುದೇ ಇದರ ಮೂಲ ಉದ್ದೇಶ. ಈ ಕುರಿತು ಸಿದ್ಧಪಡಿಸಿದ್ದ ನೀಲನಕ್ಷೆಗಳು ಈಗ ಯೋಜನೆಗಳ ರೂಪ ಪಡೆದಿವೆ' ಎಂದು ಹೇಳಿದರು.
ಚೀನಾ ಮೇಲಿನ ಅವಲಂಬನೆ ತಗ್ಗಿಸಲು ಮುಂದಾಗಿರುವ ಯುರೋಪ್ ರಾಷ್ಟ್ರಗಳ ನಡೆ ಸರಿಯಲ್ಲ. ಇದರಿಂದ ಪಾಲುದಾರ ರಾಷ್ಟ್ರಗಳು ಸಂಕಷ್ಟದ ಕುಣಿಕೆಗೆ ಸಿಲುಕಲಿವೆ. ಇಂತಹ ಏಕಪಕ್ಷೀಯ ಧೋರಣೆ, ಆರ್ಥಿಕ ನಿರ್ಬಂಧ, ಹೂಡಿಕೆಯ ಪೂರೈಕೆ ಸರಪಳಿಯನ್ನು ತುಂಡರಿಸುವ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದರು.
ಬಿಆರ್‌ಐ ಒಳಪಟ್ಟ ಎಲ್ಲಾ ರಾಷ್ಟ್ರಗಳ ಪರಸ್ಪರ ಆರ್ಥಿಕ ನೆರವಿನ ಅವಲಂಬನೆ ಹಿಂದೆ ಅಭಿವೃದ್ಧಿಯ ಆಶಯ ಅಡಗಿದೆ. ಇದಕ್ಕೆ ಬೆದರಿಕೆ, ಅಪಾಯ ಎದುರಾದರೆ ನಮ್ಮ ಬದುಕು ಸುಧಾರಿಸುವುದಿಲ್ಲ. ಅಭಿವೃದ್ಧಿಯ ವೇಗವೂ ಕುಂಠಿತಗೊಳ್ಳಲಿದೆ ಎಂದು ಹೇಳಿದರು.
ಟಿಯಾನನ್‌ಮೆನ್ ಚೌಕದ ಸಭಾಂಗಣದಲ್ಲಿ ಸಭೆ ನಡೆಯುತ್ತಿದೆ. ಜಾಗತಿಕ ದಕ್ಷಿಣ ಭಾಗಕ್ಕೆ ಸೇರಿದ ದೇಶಗಳು ಸೇರಿದಂತೆ 130ಕ್ಕೂ ಹೆಚ್ಚು ರಾಷ್ಟ್ರಗಳ ಒಂದು ಸಾವಿರ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಭಾಗವಹಿಸಿದ್ದಾರೆ.
ಬಿಆರ್‌ಐ ಯೋಜನೆಯನ್ನು ಬೇರ್ಪಡಿಸಲು ನಾವು ಮುಂದಾಗಿಲ್ಲ. ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶದ ಮೇಲಿನ ಅತಿಯಾದ ಅವಲಂಬನೆಯ ಬದಲು, ಬಂಡವಾಳ ಹೂಡಿಕೆಯ ಸರಪಳಿಯಲ್ಲಿ ವೈವಿಧ್ಯತೆ ತರಬೇಕು ಎಂಬುದು ಪಾಶ್ಚಾತ್ಯ ನಾಯಕರ ವಾದ.
ಚೀನಾವು ತೈವಾನ್‌ಗೆ ಬೆದರಿಕೆವೊಡ್ಡಿದೆ. ಕೊರೊನಾ ಕಾಲಘಟ್ಟದಲ್ಲಿ ಪಾಲುದಾರ ರಾಷ್ಟ್ರಗಳ ನಡುವೆ ವ್ಯಾಪಾರಕ್ಕೆ ಸಾಕಷ್ಟು ಅಡ್ಡಿ ಎದುರಾಗಿತ್ತು. ಹಾಗಾಗಿ, ಚೀನಾ ಮೇಲಿನ ಅತಿಯಾದ ಅವಲಂಬನೆಯನ್ನು ನಿರ್ದಿಷ್ಟ ಮಿತಿಗೆ ಸೀಮಿತಗೊಳಿಸಬೇಕು ಎಂದು ಅವರ ಒತ್ತಾಯ.