ಮಂಗಳೂರು: ತುಳು ಸಾಹಿತ್ಯ ಕ್ಷೇತ್ರದಲ್ಲಿ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿಗಳಿಗಿಂತಲೂ ತುಳು ನಾಟಕ ಕೃತಿಗಳು ಅಧಿಕ ಸಂಖ್ಯೆಯಲ್ಲಿ ಪ್ರಕಟಗೊಳ್ಳುವ ಮೂಲಕ ಅಪಾರ ಕೊಡುಗೆಯನ್ನು ನೀಡಿವೆ ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಅಡ್ಯಾರ್ ನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಅಕ್ಷಯ ಆರ್. ಶೆಟ್ಟಿ ಅವರ 'ಪೆರ್ಗ' ತುಳು ನಾಟಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ತುಳುವಿನಲ್ಲಿ 5000ಕ್ಕೂ ಅಧಿಕ ನಾಟಕಗಳು ರಚನೆಯಾಗಿದ್ದು, ಸುಮಾರು 1000ದಷ್ಟು ನಾಟಕ ಕೃತಿಗಳು ಪ್ರಕಟಗೊಂಡಿವೆ. 400ರಷ್ಟು ಕವನ ಸಂಕಲನ, 200ರಷ್ಟು ಕಥಾ ಸಂಕಲನ ಹಾಗೂ 75 ಕಾದಂಬರಿಗಳು ತುಳುವಿನಲ್ಲಿ ಪ್ರಕಟ ಆಗಿವೆ. ನವ ಸಾಹಿತಿ, ಲೇಖಕರು ತುಳು ಸಂಸ್ಕೃತಿಯನ್ನು ಹೊಸ ರೀತಿಯ ಶೋಧನೆಯ ಮೂಲಕ ವರ್ತಮಾನದಲ್ಲಿ ಇತಿಹಾಸವನ್ನು ನಾಟಕ, ಕದಾಂಬರಿಗಳ ಮೂಲಕ ಕಟ್ಟಿಕೊಡುವ ಕಾರ್ಯವನ್ನು ನಡೆಸುತ್ತಿರುವುದು ಕಂಡು ಬರುತ್ತಿದೆ. ರತ್ನವರ್ಮ ಹೆಗ್ಗಡೆ ಹಾಗೂ ಎಸ್.ವಿ. ಪಣಿಯಾಡಿ ಅವರಿಂದ ತುಳು ನಾಟಕ ಕೃತಿಗಳಿಗೆ ಮನ್ನಣೆ ಸಿಗುತ್ತಿರುವ ಕಾರಣ ತುಳು ಸಂಸ್ಕೃತಿಯು ಅನಾವರಣಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದ ಅವರು, 'ಪೆರ್ಗ' ನಾಟಕ ಕೃತಿಯ ಮೂಲಕ ಲೇಖಕಿ ಪ್ರಕೃತಿ ಮತ್ತು ತುಳುನಾಡಿನ ಆರಾಧನೆಯ ಮಹತ್ವವನ್ನು ಸಾರುವ ಕಾರ್ಯ ಮಾಡಿದ್ದಾರೆ. ವಿವೇಕದಿಂದ ಕಟ್ಟಿ ಬೆಳೆಸಿದ್ದನ್ನು ವಿವೇಕದಿಂದ ಉಳಿಸುವ ಸಾರ ಈ ಕೃತಿಯಲ್ಲಿದೆ ಎಂದರು.
ಆಕೃತಿ ಆಶಯ ಪಬ್ಲಿಕೇಶನ್ ನ ಕಲ್ಲೂರು ನಾಗೇಶ್ ಉಪಸ್ಥಿತರಿದ್ದರು. ಕೃತಿಕಾರರಾದ ಅಕ್ಷಯ ಆರ್. ಶೆಟ್ಟಿ ಸ್ವಾಗತಿಸಿದರು. ನರೇಶ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.
ಅಕ್ಷಯ ಆರ್. ಶೆಟ್ಟಿ ಅವರು ಸ್ನಾತಕೋತ್ತರ ವಿದ್ಯಾಭ್ಯಾಸದ ವೇಳೆ 'ನನ್ನ ಹಾದಿ' ಕವನ ಸಂಕಲನದ ಮೂಲಕ ಸಾಹಿತ್ಯ ರಚನೆ ಆರಂಭಿಸಿದ್ದ ಅಕ್ಷಯ ಆರ್. ಶೆಟ್ಟಿ ಅವರ 2ನೆ ಕವನ ಸಂಕಲಕ್ಕೆ ಮುಂಬೈಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಸುಶಿಲಮ್ಮ ದತ್ತಿ ಪ್ರಶಸ್ತಿ ದೊರಕಿದೆ. ಕಳೆದ ವರ್ಷ ದೆಂಗ ತುಳು ಕಾದಂಬರಿ ಉಡುಪಿ ತುಳುಕೂಟ ಏರ್ಪಡಿಸಿದ್ದ ಎಸ್.ಯು. ಪಣಿಯಾಡಿ ಪ್ರಶಸ್ತಿ ಪಡೆದಿದೆ.
'ಹಿಡಿ ಅಕ್ಕಿಯ ಧ್ಯಾನ' ಕನ್ನಡ ಕವನ ಸಂಕಲನವನ್ನು ಬಿಡುಗಡೆಗೊಳಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಪ್ರತಿಕ್ರಿಯಿಸಿ, ಸೃಜನಶೀಲ ಸಾಹಿತ್ಯವು ತನ್ನದೇ ಆದ ಭಾವವನ್ನು ಕಟ್ಟಿಕೊಡುವ ಧ್ಯಾನದ ಸಾಹಿತ್ಯವಾಗುವುದು ಬಹು ಮುಖ್ಯ. ನಮ್ಮಲ್ಲಿ ಕವಿತೆಗಳಿಗೆ ಕೊರತೆ ಇಲ್ಲ. ಆದರೆ ಧ್ಯಾನದಲ್ಲಿ ಅರಳುವ ಕವಿತೆಗಳು ವಿರಳವಾಗುತ್ತಿರುವ ಸಂದರ್ಭದಲ್ಲಿ ಅಕ್ಷಯ ಅವರ ಕವನಗಳು ಗಮನ ಸೆಳೆಯುತ್ತವೆ ಎಂದರು.