ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ಪ್ರತಿಪಕ್ಷಗಳ ಮೈತ್ರಿಕೂಟ 'ಇಂಡಿಯಾ'ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಪಕ್ಷಗಳು 'ದೆಹಲಿಯಲ್ಲಿ ಸ್ನೇಹ ಮತ್ತು ರಾಜ್ಯಗಳಲ್ಲಿ ಕುಸ್ತಿ' ಎಂಬ ಧ್ಯೇಯವಾಕ್ಯದೊಂದಿಗೆ ಸಾಗುತ್ತಿವೆ ಎಂದು ಹೇಳಿದ್ದಾರೆ.
ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ಪ್ರತಿಪಕ್ಷಗಳ ಮೈತ್ರಿಕೂಟ 'ಇಂಡಿಯಾ'ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಪಕ್ಷಗಳು 'ದೆಹಲಿಯಲ್ಲಿ ಸ್ನೇಹ ಮತ್ತು ರಾಜ್ಯಗಳಲ್ಲಿ ಕುಸ್ತಿ' ಎಂಬ ಧ್ಯೇಯವಾಕ್ಯದೊಂದಿಗೆ ಸಾಗುತ್ತಿವೆ ಎಂದು ಹೇಳಿದ್ದಾರೆ.
'ಇಂಡಿಯಾ' ಕೂಟದ ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಘೋಷಿಸಿವೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 'ಇಂಡಿಯಾ' ಮೈತ್ರಿಕೂಟವನ್ನು ಕಡೆಗಣಿಸಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದಿದ್ದಾರೆ.
ಮಧ್ಯಪ್ರದೇಶದಲ್ಲಿ ಎಸ್‌ಪಿಗೆ ಇದುವರೆಗೆ ಯಾವುದೇ ಸ್ಥಾನ ಬಿಟ್ಟುಕೊಡದ ಕಾಂಗ್ರೆಸ್ ವಿರುದ್ಧ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಕೂಟವನ್ನು 'ಅಸಂಬದ್ಧ ಒಕ್ಕೂಟ' ಹಾಗೂ 'ಘಮಂಡಿಯಾ' (ದುರಹಂಕಾರಿ) ಎಂದು ಕರೆದಿರುವ ಚೌಹಾಣ್, ಮೊದಲ ದಿನದಿಂದಲೂ ಇದನ್ನು 'ಹೊಂದಾಣಿಕೆಯಿಲ್ಲದ ಮೈತ್ರಿ' ಎಂದೇ ಹೇಳುತ್ತಿದ್ದೇವೆ. ಅವರ ದೃಷ್ಟಿಕೋನಗಳೂ ಒಂದೇ ಆಗಿರುವುದಿಲ್ಲ' ಎಂದು ಹೇಳಿದ್ದಾರೆ.
ಜೆಸಿಸಿ (ಜೆ) 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಛತ್ತೀಸಗಢ ವಿಧಾನಸಭೆಗೆ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ನೇತೃತ್ವದ ಜನತಾ ಕಾಂಗ್ರೆಸ್ ಛತ್ತೀಸಗಢ (ಜೆ) ಪಕ್ಷ ಶುಕ್ರವಾರ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಟ್ಟಿಯನ್ನು ಜೆಸಿಸಿ (ಜೆ) ಅಧ್ಯಕ್ಷ ಅಮಿತ್ ಜೋಗಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ .16 ಸ್ಥಾನಗಳ ಪೈಕಿ ಪರಿಶಿಷ್ಟ ಪಂಗಡಕ್ಕೆ ಎಂಟು ಮತ್ತು ಪರಿಶಿಷ್ಟ ಜಾತಿಗೆ ಒಂದು ಸ್ಥಾನ ಮೀಸಲಿರಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿಲ್ಲ.
'ತಮ್ಮ ಪಕ್ಷವು ಸರ್ವ ಆದಿವಾಸಿ ಸಮಾಜ (ಎಸ್‌ಎಎಸ್) ಮತ್ತು ಗೊಂಡವಾನ ಗಣತಂತ್ರ ಪಾರ್ಟಿ (ಜಿಜಿಪಿ) ಜತೆ ಮೈತ್ರಿಗಾಗಿ ಸಂಪರ್ಕಿಸುತ್ತಿದೆ' ಎಂದು ಅಮಿತ್ ಜೋಗಿ ಸುದ್ದಿಸಂಸ್ಥೆಗೆ ತಿಳಿಸಿದ್ದರು. ಆದರೆ, ಈವರೆಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ.