ಜೆರುಸಲೇಂ: ಇಸ್ರೇಲ್ ಶನಿವಾರ ಗಾಜಾದಲ್ಲಿ ಭೂದಾಳಿಯನ್ನು ಮತ್ತಷ್ಟು ವಿಸ್ತರಿಸಿದೆ. ಪದಾತಿ ದಳ ಮತ್ತು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಅಲ್ಲದೆ ಆಗಸ ಮತ್ತು ಸಮುದ್ರದ ಮೂಲಕವೂ ವ್ಯಾಪಕ ದಾಳಿ ಕೈಗೊಂಡಿದೆ ಎಂದು ಇಸ್ರೇಲ್‌ನ ಮಿಲಿಟರಿ ವಕ್ತಾರ ಹೇಳಿದ್ದಾರೆ.
ಪಡೆಗಳು ಯುದ್ಧವನ್ನು ಮುಂದುವರಿಸಿವೆ ಎಂದು ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ಶಸ್ತ್ರಸಜ್ಜಿತ ವಾಹನಗಳು ಗಾಜಾ ಪ್ರವೇಶಿಸುವ ವಿಡಿಯೊವನ್ನು ಮಿಲಿಟರಿ ಶನಿವಾರ ಬೆಳಿಗ್ಗೆ ಬಿಡುಗಡೆ ಮಾಡಿದೆ. ವಾಯು ದಾಳಿ ಮೂಲಕ ಹಮಾಸ್ ಬಂಡುಕೋರರ ಅಡಗುತಾಣಗಳನ್ನು ನಾಶಪಡಿಸಿರುವುದಾಗಿ ಹೇಳಿದೆ.
ಉತ್ತರ ಗಾಜಾದಲ್ಲಿ ಶುಕ್ರವಾರ ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಯುದ್ಧವಿಮಾನಗಳು 150 ಸುರಂಗ ಮಾರ್ಗಗಳನ್ನು ಮತ್ತು ಅಡಗುತಾಣಗಳನ್ನು ನಾಶಪಡಿಸಿವೆ. ದಾಳಿಯ ಪ್ರಮುಖ ಗುರಿಯಾಗಿದ್ದ ಕೆಲವು ಅಡಗುತಾಣಗಳೂ ಇವುಗಳಲ್ಲಿ ಪ್ರಮುಖವಾಗಿವೆ ಎಂದು ಮಿಲಿಟರಿ ತಿಳಿಸಿದೆ.
ಬಾಂಬ್‌ದಾಳಿಯಿಂದಾಗಿ ಸಂವಹನ, ಸಂಪರ್ಕ ಸೇವೆಗಳು ಸ್ತಬ್ಧಗೊಂಡಿದ್ದು ಗಾಜಾದಲ್ಲಿರುವ 23 ಲಕ್ಷ ಜನರಿಗೆ ಹೊರಗಿನ ಸಂಪರ್ಕವನ್ನು ಕಡಿತಗೊಳಿಸಿದೆ. ಹಲವು ವಾರಗಳಿಂದ ನಡೆಯುತ್ತಿರುವ ಸಂಘರ್ಷದಿಂದಾಗಿ ಈಗಾಗಲೇ ಅನೇಕ ಕಡೆ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ. ಮನೆ ಮತ್ತು ಆಶ್ರಯ ತಾಣಗಳಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಕೊರತೆ ಕಾಣಿಸಿಕೊಂಡಿದೆ.
ಬಾಂಬ್ ದಾಳಿಯಲ್ಲಿ ಇಂಟರ್‌ನೆಟ್ , ಸೆಲ್ಯುಲರ್ ಮತ್ತು ದೂರವಾಣಿ ಸಂಪರ್ಕ ಸಂಪೂರ್ಣ ನಾಶವಾಗಿದೆ ಎಂದು ಪ್ಯಾಲೆಸ್ಟೀನ್‌ನಲ್ಲಿ ದೂರಸಂಪರ್ಕ ಸೇವೆ ಒದಗಿಸುವ ಪಾಲ್‌ಟೆಲ್ ಹೇಳಿದೆ.
ಈ ಮಧ್ಯೆ ಇಸ್ರೇಲ್ ಶುಕ್ರವಾರ ರಾತ್ರಿಯಿಡೀ ನಡೆಸಿದ ದಾಳಿ ವಿಫಲವಾಗಿದೆ ಎಂದು ಹಮಾಸ್ ಹೇಳಿದೆ. ಇಸ್ರೇಲ್ ದಾಳಿಯನ್ನು ಹಿಮ್ಮೆಟ್ಟಿಸಿದ್ದಾಗಿ ತಿಳಿಸಿದೆ.
ಇಂದು ಭೇಟಿ: ಗಾಜಾದಲ್ಲಿ ಒತ್ತೆಯಾಳುಗಳ ಕುಟುಂಬದವರನ್ನು ಭಾನುವಾರ ಭೇಟಿ ಮಾಡುವುದಾಗಿ ಇಸ್ರೇಲ್‌ನ ರಕ್ಷಣಾ ಸಚಿವ ಯೊವವ್ ಗ್ಯಾಲಂಟ್ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಮತ್ತು ರಕ್ಷಣಾ ಸಚಿವರು ತಮ್ಮನ್ನು ಭೇಟಿ ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕುಟುಂಬದವರು ಶನಿವಾರ ಬೆದರಿಕೆ ಹಾಕಿದ್ದರು.
ಸುರಕ್ಷತೆ ಭರವಸೆ ಇಲ್ಲ: ಗಾಜಾ ಪಟ್ಟಿಯಲ್ಲಿ ಪತ್ರಕರ್ತರ ಸುರಕ್ಷತೆ ಬಗ್ಗೆ ಖಚಿತವಾಗಿ ಹೇಳಲು ಆಗುವುದಿಲ್ಲ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ದಾಳಿಯಲ್ಲಿ ಪತ್ರಕರ್ತರನ್ನು ಗುರಿಯಾಗಿಸುವುದಿಲ್ಲವೆಂದು ಭರವಸೆ ನೀಡುವಂತೆ ರಾಯಿಟರ್ಸ್ ಮತ್ತು ಎಎಫ್‌ಪಿ ಸುದ್ದಿಸಂಸ್ಥೆಗಳು ಆಶ್ವಾಸನೆ ಬಯಸಿದ್ದರಿಂದ ಮಿಲಿಟರಿ ಸಂಸ್ಥೆಗಳಿಗೆ ಪ್ರತಿಕ್ರಿಯಿಸಿ ಪತ್ರ ಬರೆದಿದೆ.