ತ್ರಿಶೂರ್: ಗುರುವಾಯೂರ್ ದೇವಸ್ಥಾನದ ಅಡುಗೆಯ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಬ್ರಾಹ್ಮಣರಿಗೆ ಮಾತ್ರ ಎಂದು ಗುರುವಾಯೂರ್ ದೇವಸ್ವಂ ಮಂಡಳಿ ಹೇಳಿದೆ. ಗುರುವಾಯೂರು ದೇವಸ್ವತದಲ್ಲಿ ದೇವಸ್ಥಾನದ ಅಡುಗೆಯವರ ಹುದ್ದೆಗೆ ಅರ್ಜಿ ಆಹ್ವಾನಿಸಿರುವ ಅಧಿಸೂಚನೆಯಲ್ಲಿ ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಈ ಹಿಂದೆ ಗುರುವಾಯೂರು ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ಅಡುಗೆಯಾಳಿಗೆ ನೇಮಕಗೊಂಡಾಗಲೂ ಬ್ರಾಹ್ಮಣರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆಗ ಅದು ದೊಡ್ಡ ವಿವಾದವಾಗಿತ್ತು. ಆದರೆ ದೇವಸ್ವಂ ಮಂಡಳಿ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ.
ದೇವಸ್ವಂ ಮಂಡಳಿ ನೇಮಕಾತಿಯನ್ನು ಪಿ.ಎಸ್.ಸಿ.ಗೆ ವಹಿಸುವುದಾಗಿ ಎಲ್.ಡಿ.ಎಫ್. ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ನಂತರ ನೇಮಕಾತಿಗಾಗಿ ದೇವಸ್ವಂ ನೇಮಕಾತಿ ಮಂಡಳಿಯನ್ನು ಸ್ಥಾಪಿಸಲಾಯಿತು. ನೇಮಕಾತಿ ಪ್ರಕ್ರಿಯೆಗಳಲ್ಲಿ ಸರದಿಯನ್ನು ಅನುಸರಿಸಲು ಅವಕಾಶವಿದೆ. ಈ ಮಧ್ಯೆ, ಅಡುಗೆಯ ಹುದ್ದೆಗೆ ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ದೇವಸ್ವಂ ನೇಮಕಾತಿ ಮಂಡಳಿ ಪ್ರಕಟಿಸಿದೆ.
ದೇವಸಂ ನಲ್ಲಿ ಖಾಲಿ ಇರುವ ಅಡುಗೆಯವರ ಹುದ್ದೆಗೆ ಅರ್ಜಿ ಆಹ್ವಾನಿಸಿ ಎರಡು ದಿನಗಳ ಹಿಂದೆ ಅಧಿಸೂಚನೆ ಹೊರಬಿದ್ದಿದೆ. ಮಲಯಾಳಂ ಓದಲು ಮತ್ತು ಬರೆಯಲು ತಿಳಿದಿರುವ ಹಿಂದೂ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಬ್ರಾಹ್ಮಣೇತರರು ಮತ್ತು ವಿಕಲಚೇತನರು ಅರ್ಜಿ ಸಲ್ಲಿಸುವಂತಿಲ್ಲ.
ಗುರುವಾಯೂರು ದೇವಸ್ವಂ ಮಂಡಳಿ ನೌಕರರ ನಿಯಮಾವಳಿಯಂತೆ ದೇವಸ್ವಂ ಮಂಡಳಿ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಗುರುವಾಯೂರು ದೇವಸ್ವಂ ಮಂಡಳಿ ಅಧಿಕಾರಿಗಳು ವಿವರಿಸಿದ್ದಾರೆ. ನೌಕರರ ನಿಯಂತ್ರಣ ಕಾಯಿದೆಯನ್ನು 1983 ರಲ್ಲಿ ಜಾರಿಗೊಳಿಸಲಾಯಿತು. ನಂತರ 2015 ಮತ್ತು 2016 ರಲ್ಲಿ, ಕೆಲವು ಸಣ್ಣ ತಿದ್ದುಪಡಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ.
ದೇವಸ್ವಂ ನಿರ್ವಹಣಾ ಸಮಿತಿ ಸಭೆ ನಡೆಸಿ ತೀರ್ಮಾನಿಸಿದರೆ ಮಾತ್ರ ನಿಯಮಗಳಿಗೆ ತಿದ್ದುಪಡಿ ತರಬಹುದು. ಸಮಿತಿ ದೇವಸ್ವಂ ಆಯುಕ್ತರ ಕೋರಿಕೆಯಂತೆ ಆಯುಕ್ತರು ಸÀರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಆದರೆ ಹಿಂದಿನ ನೇಮಕಾತಿಗಳು ವಿವಾದಾಸ್ಪದವಾದಾಗಲೂ ಸಮಿತಿಯು ಈ ವಿಷಯವನ್ನು ಚರ್ಚಿಸಲಿಲ್ಲ. ಘಟನೆ ಕುರಿತು ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಕೂಡ ಮೌನವಾಗಿರುವರು.