ನವದೆಹಲಿ: ಛತ್ತೀಸಗಢ ಅಬಕಾರಿ ಹಗರಣದ ಆರೋಪಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲು ಕೋರಿ ವಿಚಾರಣಾ ಕೋರ್ಟ್ ಎದುರು ಅರ್ಜಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ನಡೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನವದೆಹಲಿ: ಛತ್ತೀಸಗಢ ಅಬಕಾರಿ ಹಗರಣದ ಆರೋಪಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲು ಕೋರಿ ವಿಚಾರಣಾ ಕೋರ್ಟ್ ಎದುರು ಅರ್ಜಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ನಡೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ನಡೆದಿರುವ ₹ 2000 ಕೋಟಿ ಮೊತ್ತದ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣ ಕುರಿತಂತೆ ಇ.ಡಿ ತನಿಖೆಯನ್ನು ನಡೆಸುತ್ತಿದೆ.
'ಜುಲೈ 18ರವರೆಗೆ ಎಲ್ಲ ಪ್ರಕ್ರಿಯೆ ಸ್ಥಗಿತಗೊಳಿಸಲು ನಿರ್ದೇಶಿಸಿದ ನಂತರವೂ ವಿಚಾರಣಾ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ತುರ್ತು ಏನಿತ್ತು, ನಮಗೆ ಅರ್ಥವಾಗುತ್ತಿಲ್ಲ' ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಇ.ಡಿ ಪರ ವಕೀಲರಿಗೆ ಪ್ರಶ್ನಿಸಿತು.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಮನೋಜ್ ಮಿಶ್ರಾ ಈ ಪೀಠದ ಇತರ ಸದಸ್ಯರು. 'ಯಾವುದೇ ಕ್ರಮ ಬೇಡ ಎಂದು ಹೇಳಿದ್ದೆವು. ಈಗ ಅರ್ಜಿ ಸಲ್ಲಿಸಿರುವುದು ಆದೇಶ ಮೀರಿದಂತಾಗದೆ?. ತಪ್ಪೊ, ಸರಿಯೊ. ನಾವು ತಡೆ ನೀಡಿದ್ದೆವು' ಎಂದು ಪೀಠ ಹೇಳಿತು.
ಉದ್ಯಮಿ ಅನ್ವರ್ ಧೇಬರ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೊಹಟಗಿ ಅವರು, ಛತ್ತೀಸಗಢ ಹೈಕೋರ್ಟ್ ಜುಲೈನಲ್ಲಿ ಮಧ್ಯಂತರ ಜಾಮೀನು ನೀಡಿತ್ತು. ಅಕ್ಟೋಬರ್ 6ರಂದು ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು ಎಂದು ಪೀಠದ ಗಮನಕ್ಕೆ ತಂದರು.
ಧೇಬರ್ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಲು ಕೋರಿ ರಾಯಪುರದ ವಿಚಾರಣಾ ಕೋರ್ಟ್‌ಗೆ ಇ.ಡಿ ಪರ ವಕೀಲರು ಅಕ್ಟೋಬರ್ 9ರಂದು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.